ಭೀಕರ ಅಪಘಾತ; ಐಪಿಎಸ್ ಅಧಿಕಾರಿ ಹರ್ಷವರ್ಧನ್ ದುರ್ಮರಣ

ಹಾಸನ: (ನ್ಯೂಸ್ ಮಲ್ನಾಡ್ ವರದಿ) ಇಂದಷ್ಟೇ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಪೊಲೀಸ್ ಅಕಾಡೆಮಿಯಿಂದ ಆಗಮಿಸುತ್ತಿದ್ದ ಪ್ರೋಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಹಾಸನ – ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ನಡೆದಿದೆ.

ಟೈ‌ರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ರಸ್ತೆ ಪಕ್ಕದ ಮನೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಅವಘಡದಲ್ಲಿ ಜೀಪ್ ಸಂಪೂರ್ಣ ಜಖಂಗೊಂಡಿದೆ. ಹರ್ಷವರ್ಧನ್ ಅವರು ಕೇವಲ 25ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದು, ಮೈಸೂರಿನ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ಟ್ರೈನಿಂಗ್‌ ಪೂರ್ಣಗೊಳಿಸಿದ್ದರು. ಪ್ರೋಬೇಷನರಿ ಅವಧಿಯ ಭಾಗವಾಗಿ ಹಾಸನದಲ್ಲಿ ಎಎಸ್ಪಿಯಾಗಿ ಇನ್ನಷ್ಟೇ ಕಾರ್ಯನಿರ್ವಹಣೆ ಆರಂಭಿಸಬೇಕಾಗಿತ್ತು.

ಮಧ್ಯಪ್ರದೇಶ ಮೂಲದ ಹರ್ಷವರ್ಧನ್ ಕರ್ನಾಟಕ ಕೇಡರ್ ಗೆ ಆಯ್ಕೆಯಾಗಿರುವ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲು ಝಿರೋ ಟ್ರಾಫಿಕ್ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಹರ್ಷವರ್ಧನ್ ಪ್ರಯಾಣಿಸುತ್ತಿದ್ದ ಜೀಪ್ ಚಾಲಕ, ಹಾಸನದ ಡಿಎಆರ್ ಕಾನ್ ಸ್ಟೇಬಲ್ ಮಂಜೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ.... ಅವರನ್ನು ಕರೆತರಲು ಮಂಜೇಗೌಡ ಹಾಸನ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಬೊಲೆರೋ ವಾಹನವನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಅಧಿಕಾರಿಯನ್ನು ಹಾಸನಕ್ಕೆ ಕರೆತರುವಾಗ ಅವಘಡ ಸಂಭವಿಸಿದೆ.

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.