ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಐಟಿಐ ವಿದ್ಯಾರ್ಥಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಳಸಾಪುರದ ಗಂಗಾಧರ್ ಮತ್ತು ಹಾಸನದ ಕುಮಾರ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ಆರೋಪಿಯಾದ ಗಂಗಾಧರ್, ತನಗೆ ಹಾಸನದ ಕುಮಾರ್ ಪರಿಚಯವಿದ್ದು ಅವರ ಮೂಲಕ ಬ್ಯಾಂಕ್ನಲ್ಲಿ ಅಟೆಂಡರ್ ಕೆಲಸ ಕೊಡಿಸುವುದಾಗಿ ಬೆಳವಾಡಿ ಗ್ರಾಮದ ವಿದ್ಯಾರ್ಥಿಯ ಪೋಷಕರನ್ನು ನಂಬಿಸಿದ್ದರು. ಉದ್ಯೋಗಕ್ಕಾಗಿ ₹2.50 ಲಕ್ಷ ಹಣ ನೀಡಬೇಕೆಂದು ಹೇಳಿದ್ದರಿಂದ, ಭರವಸೆ ನಂಬಿದ ಪೋಷಕರು 2024ರ ಜುಲೈ ತಿಂಗಳಲ್ಲಿ ಗಂಗಾಧರ್ ಅವರ ಮನೆಯಲ್ಲಿ ಆರೋಪಿಗಳಿಗೆ ನಗದು ರೂಪದಲ್ಲಿ ಹಣ ನೀಡಿದ್ದರು.
ಇದಾದ ಬಳಿಕ ಸುಮಾರು ಎರಡು ತಿಂಗಳ ನಂತರ ಆರೋಪಿಗಳು 2019ರ ಸಾಲಿನ ಹಳೆಯ ದಿನಾಂಕವಿರುವ ಪ್ರವೇಶ ಪತ್ರವನ್ನು ನೀಡಿದ್ದರು. ಈ ಬಗ್ಗೆ ಪೋಷಕರು ಪ್ರಶ್ನಿಸಿದಾಗ, ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡಿರುವುದರಿಂದ ಹಳೆಯ ಪ್ರವೇಶ ಪತ್ರವೇ ಮಾನ್ಯವಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಮತ್ತೊಮ್ಮೆ ನಂಬಿಸಿದ್ದರು.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
ದಿನಗಳು ಕಳೆದರೂ ಪರೀಕ್ಷೆ ನಡೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೋಷಕರು ಉದ್ಯೋಗ ಬೇಡವೆಂದು ತಿಳಿಸಿ ತಮ್ಮ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದರು. ತೀವ್ರ ಒತ್ತಡದ ನಂತರ ಆರೋಪಿಗಳು ಐದು–ಆರು ತಿಂಗಳ ಹಿಂದೆ ₹1.70 ಲಕ್ಷ ಹಣವನ್ನು ಹಿಂದಿರುಗಿಸಿದ್ದಾರೆ. ಆದರೆ ಉಳಿದ ₹80,000 ಹಣವನ್ನು ಇನ್ನೂ ನೀಡದೇ ಸತಾಯಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಎಸಗಿದ ಆರೋಪದ ಮೇರೆಗೆ ಗಂಗಾಧರ್ ಮತ್ತು ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಜನತೆಯ ಗಮನಕ್ಕೆ; ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ದರೆ ಬೀಳಲಿದೆ ಭಾರಿ ದಂಡ!












