ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕ್ಷುಲ್ಲಕ ಕಾರಣಕ್ಕೆ ಭಿಕ್ಷುಕಿಯೊಬ್ಬಳನ್ನು ಸೈಜುಕಲ್ಲಿನಿಂದ ಹೊಡೆದು ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಗರದ ರಾಮನಹಳ್ಳಿಯ ಎಸ್.ಆರ್. ಪೂರ್ಣೇಶ್ಗೆ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹81 ಸಾವಿರ ದಂಡ ವಿಧಿಸಿದೆ.
ಕೊಲೆಯಾದ ಭಿಕ್ಷುಕಿಯನ್ನು ಕನಕ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ:
2024ರ ಮೇ 10ರಂದು ಬೆಳಗಿನ ಜಾವ ಸುಮಾರು 2.30ರ ವೇಳೆಗೆ ನಗರದ ಐ.ಜಿ. ರಸ್ತೆಯ ಗೋಡೆ ಪಕ್ಕದಲ್ಲಿ ಮಲಗಿದ್ದ ಕನಕ ಅವರನ್ನು ಎಬ್ಬಿಸಿದ ಪೂರ್ಣೇಶ್, ತನ್ನ ಕಾಲು ಒತ್ತುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಕನಕ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯ ತಲೆಯ ಮೇಲೆ ಸೈಜುಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿತ್ತು. ಘಟನೆಯ ವೇಳೆ ಕನಕ ಅವರನ್ನು ರಕ್ಷಿಸಲು ಮುಂದಾದವರ ಮೇಲೆಯೂ ಕಲ್ಲು ಎತ್ತಿಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಕಿಣಿ ಅವರು ಆರೋಪಿಯ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ ₹81 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಲೋಹಿತಾಶ್ವಾಚಾರ್ ವಾದ ಮಂಡಿಸಿದ್ದರು.












