ಎನ್.ಆರ್.ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಬಿ.ಎಚ್.ಕೈಮರ ನಾರಾಯಣಗುರು ಸಭಾಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಸ್ಯೆಗಳ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮಲೆನಾಡಿಗರು ಮನವಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ; ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ; ಯಾವ ಯಾವ ಜಿಲ್ಲೆಗೆ ಎಷ್ಟೆಷ್ಟು ಪರಿಹಾರ ಗೊತ್ತಾ?

270ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆ:
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. .ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಲ್ಲಿ 270 ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. ಬಹುತೇಕ ಅರ್ಜಿಗಳು ಕಂದಾಯ ಅರಣ್ಯ ಭೂಮಿಗೆ ಸಂಬಂಧಿಸಿದ್ದವೇ ಆಗಿದ್ದವು. ಮುಳುಗಡೆಯಾದ ಜಮೀನಿಗೆ ಪರಿಹಾರ ಬಂದಿಲ್ಲ, ಅರಣ್ಯ-ಕಂದಾಯ ಭೂಮಿ ಸಮಸ್ಯೆ ಬಗೆಹರಿದಿಲ್ಲ, ಬಗೆಹರಿರುವ ಜಮೀನಿನ ಪೋಡಿಯಾಗಿಲ್ಲ, ಕಾಡುಪ್ರಾಣಿ -ಮಾನವ ಸಂಘರ್ಷ ಕೊನೆಯಾಗಿಲ್ಲ ಎಂಬ ಪ್ರಶ್ನೆಗಳು ಮರುಕಳಿಸಿದವು.

ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಪರಿಹಾರ ಇಲ್ಲ:
ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಭೂಮಿ ಬಿಟ್ಟುಕೊಟ್ಟಿರುವ ರೈತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಪರಿಹಾರ ಎಷ್ಟು ನೀಡಬೇಕು ಎಂಬುದರ ಮೌಲ್ಯಮಾಪನ ಕಾರ್ಯವೇ ಇನ್ನೂ ಮುಗಿದಿಲ್ಲ. ಅಲ್ಲಿ ಬದುಕಲೂ ಆಗದೆ, ಬರಿಗೈನಲ್ಲಿ ಹೊರಗೆ ಬರಲೂ ಸಾಧ್ಯವಾಗದೆ ಜನ ಪರದಾಡುತ್ತಿದ್ದಾರೆ. ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಅರಣ್ಯ ಕಾಯ್ದೆಯನ್ನು ತೋರಿಸಿ ಕಳುಹಿಸುತ್ತಿದ್ದಾರೆ. ಅರಣ್ಯ ವ್ಯವಸ್ಥಾಪನ ಅಧಿಕಾರಿ (ಎಫ್‌ಎಸ್‌ಒ) ವಿಚಾರಣೆ ಪೂರ್ಣಗೊಳಿಸಿ ಒಪ್ಪಿಗೆ ನೀಡಿದ್ದರೂ, ಪೋಡಿ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಹೆದರುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ; ಈ ಬಾರಿ ದೀಪಾವಳಿಗೆ ಗೈಡ್ ಲೈನ್ಸ್ ನೀಡಿದ ಸರ್ಕಾರ; ಪಟಾಕಿ ಮಾರಾಟ, ಸಿಡಿಸಲು ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ಜಂಟಿ ಸರ್ವೆ ಪೂರ್ಣಗೊಳ್ಳುವ ತನಕ ಅರಣ್ಯ ಅಧಿಕಾರಿಗಳು ಮುಂದಾಗದಂತೆ ಸಚಿವ ಸೂಚನೆ:
ಗ್ರಾಮಗಳಿಗೆ ಬಸ್ ಸೌಲಭ್ಯ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶೌಚಾಲಯ ಸ್ವಚ್ಛಗೊಳಿಸಲು ಅನುದಾನವಿಲ್ಲ ಎಂಬ ಅರ್ಜಿಗಳನ್ನೂ ಜನ ಪ್ರಸ್ತಾಪಿಸಿದ್ದು, ಇದಕ್ಕೆ ಸ್ಪಧಿಂಸಿದ ಸಚಿವ ಕೆ.ಜೆ ಜಾರ್ಚ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು. ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಮುಂದುವರೆದಿದ್ದು, ಜಂಟಿ ಸರ್ವೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಸರ್ವೆ ಕಾರ್ಯ ಪೂರ್ಣಗೊಳ್ಳುವ ತನಕ ಯಾವುದೇ ಕ್ರಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬಾರದು ಎಂದು ಸೂಚನೆ ನೀಡಿದರು. ಇನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಭೂಮಿ ನೀಡಿರುವ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಪರಿಹಾರದ ಮೊತ್ತ ಮೌಲ್ಯಮಾಪನ ಮಾಡಲು ಸಿಬ್ಬಂದಿ ಕೊರತೆಯ ನೆಪ ಹೇಳಬಾರದು. ವಾರದಲ್ಲಿ ಒಂದು ದಿನವನ್ನು ಈ ಕಾರ್ಯಕ್ಕೆ ಮೀಸಲಿಡಬೇಕು ಎಂದು ತಿಳಿಸಿದರು.
ಹಕ್ಕುಪತ್ರ ನೀಡಲು ಅಧಿಕಾರಿಗಳು ಅಡ್ಡಿ:
ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ನಮೂನೆ 50, 53 ಹಾಗೂ 57 ಅಡಿ ಅರ್ಜಿ ಸಲ್ಲಿಸಿರುವ ರೈತರಿಗೆ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಸಾಗುವಳಿ ಮಾಡುತ್ತಿರುವ ರೈತರ ಸ್ಥಾನದಲ್ಲಿ ನಿಂತು ಅಧಿಕಾರಿಗಳು ಯೋಚನೆ ಮಾಡಬೇಕು. ಕೊಪ್ಪದಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿ (ಎಫ್‌ಎಸ್‌ಒ) ಕಚೇರಿ ಆರಂಭಿಸಬೇಕು. ಹೊನ್ನೆಕೂಡಿಗೆ ಏತನೀರಾವರಿ ಯೋಜನೆಯ ಪೈಪ್ ಲೈನ್ ಅಳವಡಿಕೆಗೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸಬೇಕು. ಶೃಂಗೇರಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಿಸಲು ಗುರುತಿಸಿರುವ ಜಾಗಕ್ಕೆ ಅರಣ್ಯ ಇಲಾಖೆಯಿಂದ ಅನುಮೋದನೆ ಕೊಡಿಸಬೇಕು. ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು. ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆಚುಕ್ಕಿ ರೋಗ ಪೀಡಿತ ತೋಟಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಟಿ.ಡಿ.ರಾಜೇಗೌಡ ಒತ್ತಾಯಿಸಿದರು.
ವಿದ್ಯಾರ್ಥಿಗಳು ಸುಸ್ತು:
ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವು ಬೆಳಗ್ಗೆ 10.30 ಕ್ಕೆ ನಿಗದಿಯಾಗಿತ್ತು. ಆದರೆ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ರವರು ಮಧ್ಯಾಹ್ನ 12.30 ಕ್ಕೆ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದರು. ಸಚಿವರನ್ನು ಬರಮಾಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರಿಂದ ಕುಂಭ ಮೇಳ, ಶಾಲಾ ಮಕ್ಕಳಿಂದ ಬ್ಯಾಂಡ್ ಸೆಟ್ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದರಿಂದಾಗಿ ಬೆಳಗ್ಗೆ 10ಕ್ಕೆ ಬಂದಿದ್ದ ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಕಾದು ಬಿಸಿಲಿನ ಝಳಕ್ಕೆ ಸುಸ್ತಾಗಿದ್ದರು.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 03.11.2023
ಇನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಯಶಪಾಲ್ ಶಿರಸಾಗರ, ರಮೇಶ್ ಬಾಬು, ಎಲ್.ನಂದೀಶ್ ಇದ್ದರು.
ಚಿಕ್ಕಮಗಳೂರು: ಲಂಚಬಾಕ ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗನಾಥಸ್ವಾಮಿ ಹಾಗೂ ದ್ವಿತಿಯ ದರ್ಜೆ ಸಹಾಯಕ ಅಸ್ರಾರ್ ಅಹಮದ್ ಲಂಚಕ್ಕೆ ಬೇಡಿಕೆ ಇಟ್ಟ ಕಾರಣ ಕಾಂಟ್ರ್ಯಾಕ್ಟರ್ ಓರ್ವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಣ ಇಲಾಖೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ, ಶಾಲಾ ಶೌಚಾಲಯ ನಿರ್ಮಾಣ ಯೋಜನೆ ಅಡಿ ಶೌಚಾಲಯ ನಿರ್ಮಾಣ ಮಾಡಲು ಡಿಡಿಪಿಐ, ರಂಗನಾಥಸ್ವಾಮಿ, ಮತ್ತು ಅವರ ಕಛೇರಿ ಸಿಬ್ಬಂದಿ ಅಸ್ರಾರ್ ಅಹಮ್ಮದ್ 2% ರಂತೆ 10,000/- ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಲೋಕಾಯಕ್ತ ಪೊಲೀಸ್ ಠಾಣೆಗೆ ನೀಡಿದ ಲಿಖಿತ ದೂರಿನ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ), ರಂಗನಾಥಸ್ವಾಮಿ ಮತ್ತು ಅವರ ಕಛೇರಿಯ ಸಿಬ್ಬಂದಿ ಅಸ್ರಾರ್ ಅಹಮ್ಮದ್, ದ್ವಿತಿಯ ದರ್ಜೆ ಸಹಾಯಕರು ಈ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ಲಂಚ ಪಡೆಯುವ ವೇಳೆ ಬಂಧಿಸಿದ್ದಾರೆ.
ಈ ದಾಳಿಯಲ್ಲಿ ಡಿವೈಎಸ್ಪಿ ಜೆಜೆ ತಿರುಮಲೇಶ್ , ಇನ್ಸ್ಪೆಕ್ಟರ್ಗಳಾದ ಮಲ್ಲಿಕಾರ್ಜುನ್, ಅನಿಲ್ ರಾಥೋಡ್, ಸಿಬ್ಬಂದಿ ಲೋಕೇಶ್, ವೇದಾವತಿ, ವಿಜಯ ಭಾಸ್ಕರ್, ಸಲ್ಮಾ ಬೇಗಮ್, ಅನಿಲ್ ನಾಯಕ್, ಪ್ರಸಾದ್ ,ರವಿ, ಮುಜೀಬ್ ಪಾಲ್ಗೊಂಡಿದ್ದರು













