ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಳಿ ಹುಲಿ ಉಗುರು ಪತ್ತೆಯಾದ ಬಳಿಕ ಆರಂಭವಾದ ಹುಲಿ ಉಗುರು, ಚರ್ಮ ಕಾರ್ಯಾಚರಣೆ ಚಿತ್ರ ನಟರು, ಸ್ವಾಮೀಜಿಗಳು ಸೇರಿದಂತೆ ರಾಜಕಾರಣಿಗಳ ಸುತ್ತಲೂ ಸುತ್ತಿದ್ದು ಇದೀಗ ಚಿಕ್ಕಮಗಳೂರಿನ ದತ್ತಪೀಠದ ವರೆಗೆ ಬಂದು ನಿಂತಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರಿನ ಡಾಲರ್ ಧರಿಸಿದ ಸೆಲೆಬ್ರಿಟಿಗಳ, ಸಿನಿಮಾ ನಟರ, ರಾಜಕಾರಣಿಗಳ ಫೋಟೋಗಳು ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್ ಆಗಿದೆ. ಅದರಂತೆ ಶಾಖಾದ್ರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಜರಂಗದಳದವರು ಅರಣ್ಯ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ.

ದತ್ತಪೀಠದಲ್ಲಿ ಅನಧಿಕೃತವಾಗಿ ವಾಸವಿರೋ ಶಾಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಎಫ್.ಓ.ಗೆ ಬಜರಂಗದಳದವರು ಮನವಿ ಮಾಡುವ ನಿರ್ಧಾರ ಮಾಡಿದ್ದಾರೆ.
ಹುಲಿ ಉಗುರು ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಹಾಕಿರುವ ಪ್ರಕರಣಗಳನ್ನು ನಾವು ಗಮನಿಸಿದ್ದೇವೆ. ಅದೇ ರೀತಿ ಖಾಂಡ್ಯಾ ದೇವಸ್ಥಾನದ ಅರ್ಚಕರನ್ನ ಬಂಧಿಸಿರುವ ರೀತಿಯೇ ಶಾಖಾದ್ರಿ ಈಗಾಗಲೇ ಒಪ್ಪಿಕೊಂಡಿದ್ದಾರೆ ಅವರ ಮನೆಯಲ್ಲಿ ಚಿರತೆಯ ಚರ್ಮ ಇದೆ ಎಂದು ಅರ್ಚಕರನ್ನು ಹೇಗೆ ಕಾನೂನಿನ ಅಡಿಯಲ್ಲಿ ಬಂಧಿಸಿದ್ದಾರೋ ಅದೇ ರೀತಿ ಶಾಖಾದ್ರಿಯನ್ನು ಕೂಡ ಬಂಧಿಸಬೇಕು ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ – ಬಜರಂಗದಳ ಜಿಲ್ಲಾ ಸಹ ಸಂಯೋಜಕ ಶ್ಯಾಂ ವಿ ಗೌಡ
ಶಾಖಾದ್ರಿ ಮನೆಯ ಮುಂಭಾಗದಲ್ಲಿ ಕಾದು ಕುಳಿತ ಅರಣ್ಯ ಸಿಬ್ಬಂದಿ
ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ವೈರಲ್ ಹಿನ್ನೆಲೆ ಶಾಖಾದ್ರಿ ಅವರ ಮನೆಗೆ ಇಂದು Ev. ಮೋಹನ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ದೇವಸ್ಥಾನದ ಅರ್ಚಕರ ಶಾಖಾದ್ರಿ ನಿವಾಸಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಮನೆಗೆ ಬೀಗ ಹಾಕಿದ್ದ ಹಿನ್ನೆಲೆ ಅರಣ್ಯ ಸಿಬ್ಬಂದಿ ಮನೆಯ ಹೊರ ಭಾಗದಲ್ಲಿ ಕಾದು ಕುಳಿತಿದ್ದಾರೆ ಎನ್ನಲಾಗಿದೆ.
ಹುಲಿ ಚರ್ಮದ ಬಗೆಗಿನ ಮಾಹಿತಿ ಕಲೆ ಹಾಕಲು ಅರಣ್ಯ ಸಿಬ್ಬಂದಿಗಳು ಮಾರ್ಕೆಟ್ ರಸ್ತೆಯಲ್ಲಿರುವ ಶಾಖಾದ್ರಿ ಸೈಯದ್ ಗೌಸ್ ಮೋಯಿದ್ದೀನ್ ನಿವಾಸಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಶಾಖಾದ್ರಿ ಮನೆಯ ಮುಂಭಾಗದಲ್ಲಿ ಅರಣ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.













