ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಸಹಕಾರ ಸಂಘಗಳಲ್ಲಿ ಸರಳ ವ್ಯವಸ್ಥೆಯಲ್ಲಿ ಕೃಷಿಕರಿಗೆ ಸಾಲ ಸೌಲಭ್ಯ, ಯಂತ್ರೋಪಕರಣ, ರಸಗೊಬ್ಬರ ಮಾರಾಟ ಮಾಡುತ್ತಿದೆ. ಕೃಷಿಕರಿಗೆ ಶೂನ್ಯ ಬಡ್ಡಿಯಲ್ಲಿ ಐದು ಲಕ್ಷ ರೂ., ಶೇ.3ಬಡ್ಡಿಯಲ್ಲಿ 15 ಲಕ್ಷ ರೂ.ವರೆಗೆ ಸಾಲವನ್ನು ಸಂಘಗಳ ಮೂಲಕ ನೀಡುತ್ತಿದೆ ಶಾಸಕ ರಾಜೇಗೌಡ ಹೇಳಿದರು.

ಗುರುವಾರ ಪಟ್ಟಣದ ಶ್ರೀ ಶಾರದಾ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಆರ್ಥಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ಸಹಕಾರ ಸಂಘದಿಂದ ಮಹತ್ತರ ಬದಲಾವಣೆ ಆಗುತ್ತಿದೆ. ಗಾಂಧಿ, ನೆಹರೂ ಅವರ ಕನಸುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಾರಗೊಳಿಸುತ್ತಿವೆ ಎಂದರು.

ಇಸ್ರೇಲ್ ವಿಯೆಟ್ನಾಂ ದೇಶದ ಸಹಕಾರ ಸಂಘಗಳು ಒಗ್ಗೂಡಿ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿವೆ. ಕೃಷಿಕರು ಖಾಸಗಿ ಸಂಸ್ಥೆಗಳಲ್ಲಿ ಸಾಲ ಪಡೆದು ಕಷ್ಟಕ್ಕೆ ಸಿಲುಕಬಾರದು ಎಂಬುದು ಸರ್ಕಾರದ ಉದ್ದೇಶ. ಶ್ರೀ ಶಾರದಾ ಪಿಎಸಿಎಸ್ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ ಮಾತನಾಡಿ ಅತಿಹೆಚ್ಚು ಆಸ್ತಿ ಜತೆ 1,500 ಷೇರುದಾರರನ್ನು ಹೊಂದಿರುವ ಸಂಸ್ಥೆಗೆ 110 ವರ್ಷಗಳ ಇತಿಹಾಸವಿದೆ. ನಬಾರ್ಡ್ ಯೋಜನೆ ಹಾಗೂ ಸಂಸ್ಥೆ ಮೂಲಕ 2.5ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದು, ಸಹಕಾರ ಸಂಘ ಜಿಲ್ಲೆಯ ಅತ್ಯುತ್ತಮ ಸಂಘಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ದೇಶಕ ಚೇತನ್ ಹೆಗಡೆ ಮಾತನಾಡಿ, ಷೇರುದಾರರು ಲಾಭಾಂಶವನ್ನು ಕಟ್ಟಡಕ್ಕೆ ದೇಣಿಗೆ ನೀಡಿದ್ದಾರೆ. ಶ್ರೀ ಶಾರದಾ ಪಿಸಿಎಸ್ ವಾರ್ಷಿಕ 23 ಕೋಟಿ ರೂ. ವ್ಯವಹಾರ ನಡೆಸಿದ್ದು 4 ಕೋಟಿ ಕೃಷಿ ಸಾಲ, 9 ಕೋಟಿ ಕೃಷಿಯೇತರ ಸಾಲ ನೀಡಿದೆ.15 ಕೋಟಿ ರೂ. ಠೇವಣಿ ಜತೆಗೆ ಪ್ರತಿ ದಿನ 50 ಸಾವಿರ ರೂ. ಪಿಗ್ಗಿ ಸಂಗ್ರಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆ ಅಧ್ಯಕ್ಷ ನರೇಂದ್ರ ಹೆಗಡೆ, ಉಪಾಧ್ಯಕ್ಷ ಎಚ್. ಎಸ್.ಗಣೇಶ್, ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷರಾದ – ರಮೇಶ್ ಭಟ್, ದಿನೇಶ್ ಹೆಗಡೆ, ಮೇಗಳಬೈಲು ಚಂದ್ರಶೇಖರ್, ಪ್ರಸನ್ನ, ಮ್ಯಾಮ್ಮೋಸ್ ನಿರ್ದೇಶಕರಾದ ಸುರೇಶ್ಚಂದ್ರ, ಟಿ.ಕೆ. ಪರಾಶರ, ಸಂಸ್ಥೆ ನಿರ್ದೇಶಕರಾದ ಗೌತಮ್, ಶಿವಮೂರ್ತಿ, ಪ್ರದೀಪ್, ಜಿ.ವಿ.ಮೋಹನ್ ಇದ್ದರು.
ಜನರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸಲು ಸೂಚನೆ ನೀಡಿದ ಸಿಎಂ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜನರ ಆಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆ.25 ರಂದು ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜನತಾ ದರ್ಶನ” ಕಾರ್ಯಕ್ರಮ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ರಜನೀಶ್ ಗೋಯೆಲ್ ಸುತ್ತೋಲೆ ಹೊರಡಿಸಿದ್ದಾರೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ ಶಿಷ್ಟಾಚಾರಕ್ಕೆ ಅನುಗುಣವಾಗಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುಬೇಕು. ಈ ಸಂಬಂಧ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡು, ವ್ಯವಸ್ಥಿತವಾಗಿ ಹಾಗೂ ಜವಾಬ್ದಾರಿಯುತವಾಗಿ ನಡೆಸುವ ಕುರಿತು ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಾರ್ವಜನಿಕ ಹಾಗೂ ವೈಯಕ್ತಿಕ ಅರ್ಜಿಗಳನ್ನು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಕಛೇರಿ ಮತ್ತು ತಾಲೂಕು ಪಂಚಾಯಿತಿ ಕಛೇರಿಗಳಲ್ಲಿ ದಿನಾಂಕ: 23-09-2023 ರ (ಶನಿವಾರ) ಸಂಜೆ 5.30 ರವರೆಗೆ ಸ್ವೀಕರಿಸಿ, ವೈಯಕ್ತಿಕ ಅರ್ಜಿಗಳನ್ನು ಮತ್ತು ಸಾರ್ವಜನಿಕವಾಗಿ ಸಲ್ಲಿಸುವ ಅರ್ಜಿಗಳನ್ನು ಪ್ರತ್ಯೇಕ ವಹಿಗಳಲ್ಲಿ ನೋಂದಾಯಿಸಿ ಹಾಗೂ ಸದರಿ ಅರ್ಜಿಗಳನ್ನು ಗಣಕೀಕರಣಗೊಳಿಸಿ ಸಂಬಂಧಪಟ್ಟ ಅರ್ಜಿದಾರರುಗಳಿಗೆ ಕ್ರ.ಸಂ. 1 ರಿಂದ ಟೋಕನ್ ಗಳನ್ನು ತಾಲ್ಲೂಕುವಾರು ನೀಡುತ್ತಾರೆ.
24-09-2023 (ಭಾನುವಾರ) ರಂದು ವೈಯಕ್ತಿಕ ಅರ್ಜಿಗಳನ್ನು ಇಲಾಖಾವಾರು ಯೋಜನ ನಂಬರ್ ನೊಂದಿಗೆ ಪ್ರತ್ಯೇಕಿಸಿ ಸಾರ್ವಜನಿಕವಾಗಿ ಬಂದ ಅರ್ಜಿಗಳನ್ನು ಇಲಾಖಾವಾರು ಟೋಕನ್ ನಂಬರ್ ನೊಂದಿಗೆ ಪ್ರತ್ಯೇಕಿಸಿ ಹಾಗೂ ಸ್ವೀಕೃತಗೊಂಡ ಅರ್ಜಿಗಳನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತರಲು ಸೂಚಿಸಿದ್ದಾರೆ.
25-09-2023 (ಸೋಮವಾರ) ರಂದು ನಡೆಯಲಿರುವ “ಜನತಾ ದರ್ಶನ” ಕಾರ್ಯಕ್ರಮಕ್ಕೆ ನುರಿತ ಕಂಪ್ಯೂಟರ್ ಅಪರೇಟರ್ ಮತ್ತು ಮೇಲುಸ್ತುವಾರಿಗೆ ಶಿರಸ್ತೇದಾರ್ ಮತ್ತು ತಾಲೂಕು ಪಂಚಾಯಿತಿಯಿಂದ ಸಹಾಯಕ ನಿರ್ದೇಶಕರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬೆಳಿಗ್ಗೆ 6.00 ಗಂಟೆಗೆ ಹಾಜರಿದ್ದು, ತಮ್ಮ ತಾಲ್ಲೂಕಿಗೆ ಸಂಬಂಧಿಸಿದ ಕೌಂಟರ್ ಅನ್ನು ಪರಿಶೀಲಿಸಿಕೊಮಡು ಬೆಳಿಗ್ಗೆ 5 ಗಂಟೆಯಿಂದ ಕೌಂಟರ್ ನಲ್ಲಿ ತಮ್ಮ ತಾಲ್ಲೂಕಿಗೆ ಸಂಬಂಧಿಸಿದಂತೆ ಬರುವ – ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಿ ಅರ್ಜಿದಾರರುಗಳಿಗೆ ಟೋಕನ್ ಗಳ ವಿತರಣೆ ಮಾಡಿ ಬಂದಂತಹ ಅರ್ಜಿಗಳನ್ನು ಇಲಾಖಾವಾರು ಪ್ರತ್ಯೆಕೀಸಿ ಕಾರ್ಯಕ್ರಮದಲ್ಲಿ ನೀಡಲು ತಿಳಿಸಿದ್ದಾರೆ.
ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವೀಕೃತವಾಗಿರುವ ಅರ್ಜಿಗಳನ್ನು ಪರಿಶೀಲಿಸಿಕೊಂಡು ಪ್ರತ್ಯೇಕಿಸಿ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಕ್ರಮ ವಹಿಸಿ ಉಪವಿಭಾಗಾಧಿಕಾರಿಗಳು ತಮ್ಮ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳ ಉಸ್ತುವಾರಿಯನ್ನು ನೋಡಲು ಹಾಗೂ ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಕ್ರಮ ವಹಿಸಲು ಸೂಚಿಸಿದ್ದಾರೆ.
ಇನ್ನು ಮಾನ್ಯ ಮುಖ್ಯಮಂತ್ರಿಯವರ ನಿರ್ದೇಶನದಂತೆ ಇಂಧನ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಜಿಲ್ಲೆಯ ಮಾನ್ಯ ಶಾಸಕರುಗಳ ಉಪಸ್ಥಿತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು 25-09-2023 (ಸೋಮವಾರ) ಬೆಳಿಗ್ಗೆ 10.30 ಗಂಟೆಗೆ ಕ.ವಿ.ಪ್ರ.ನಿ.ನಿ.(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ನೌಕರರ ಸಭಾ ಭವನ, ರತ್ನಗಿರಿ ರಸ್ತೆ, ಚಿಕ್ಕಮಗಳೂರು ಇಲ್ಲಿ ನಡೆಯಲಿದೆ.













