ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಅರಣ್ಯ ಒತ್ತುವರಿ ತೆರವು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ರಂಭಾಪುರಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಬೆಂಬಲ ಸೂಚಿಸಿದರು.

ರಂಭಾಪುರಿ ಪೀಠದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಭಾನುವಾರ ಆಯೋಜಿಸಿದ್ದ ಮಲೆನಾಡಿಗರ ಸಮಸ್ಯೆ ಕುರಿತು ಮಲೆನಾಡಿಗರ ಸಭೆಯಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, ಮಲೆನಾಡಿನಲ್ಲಿ ಪ್ರಸ್ತುತ ಉದ್ಭವಿಸಿರುವ ಅರಣ್ಯ ಒತ್ತುವರಿ, ಕಸ್ತೂರಿ ರಂಗನ್ ವರದಿಯಂತಹ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವಶ್ಯಕ. ಮಲೆನಾಡಿನ ಜನರಿಗೆ ಕಸ್ತೂರಿ ರಂಗನ್ ವರದಿ, ಅರಣ್ಯ ಒತ್ತುವರಿ ತೆರವಿನ ವಿಚಾರದ ತಿಳುವಳಿಕೆಗಳು ಇಲ್ಲದಿರುವುದೇ ಇಂದಿನ ಆತಂಕ ಮತ್ತು ವರದಿಗಳ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಲ್ಲಿ ಸರ್ಕಾರಗಳು ಹಿಂದುಳಿದಿರುವುದು ಕಾರಣವಾಗಿದೆ.
ಜಿಲ್ಲೆಯ ಎಲ್ಲಾ ಶಾಸಕರು ಜನಹಿತಕ್ಕಾಗಿ ಒಗ್ಗಟ್ಟಿನಿಂದ ಹೋರಾಡಿದರೆ ಯಶಸ್ಸು ಖಚಿತ. ನಾವು ಕೈಗೊಂಡ ನಿರ್ಣಯಗಳು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲುಪಿ ಪರಿಣಾಮ ಬೀರಬೇಕಿದೆ. ಮಲೆನಾಡಿನ ಸಣ್ಣ ಕುಟುಂಬಗಳು ತಮ್ಮ ಜೀವನೋಪಾಯಕ್ಕೆ 1-2 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ. ಇಂತಹ ಒತ್ತುವರಿ ತೆರವು ಸರಿಯಲ್ಲ. ಇದನ್ನು ಕೂಡಲೇ ನಿಲ್ಲಿಸಬೇಕು. ಕ್ಷೇತ್ರದ ಶಾಸಕರು ಸಹ ಜನರ ದನಿಯಾಗಬೇಕಿದೆ.
ಇದನ್ನೂ ಓದಿ: SSLC, PUC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ
ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟ ಸುರಕ್ಷಿತವಾಗಿರಬೇಕು ಎಂಬುದು ಒಳ್ಳೆಯ ನಿರ್ಧಾರವಾದರೂ ಇದರಿಂದ ಸಾಮಾನ್ಯರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂದು ಅರಿಯಬೇಕಿದೆ. ಸಮಸ್ಯೆಗಳನ್ನು ರಾಜ್ಯ-ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಅತ್ಯಂತ ಸೂಕ್ಷ್ಮವಾದ ಈ ವಿಚಾರದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಅಗತ್ಯ. ರಂಭಾಪುರಿ ಪೀಠ ಮಲೆನಾಡಿನ ಹೋರಾಟಗಾರರಿಗೆ ಬೆಂಬಲ ನೀಡುತ್ತದೆ ಎಂದು ರಂಭಾಪುರಿ ಶ್ರೀಗಳು ಹೇಳಿದರು.
ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿ, ರೈತ ಎಂದಿಗೂ ಹಸಿರುನಾಶ ಮಾಡಿಲ್ಲ. ಪ್ರಕೃತಿ ವಿಕೋಪದಂತ ಘಟನೆಗಳು ಅನೇಕ ವರ್ಷಗಳಿಂದ ನಡೆಯುತ್ತಿದೆ. ಮೇಘ ಸ್ಫೋಟ ಶತ ಶತಮಾನದಿಂದ ನಡೆಯುತ್ತಿದೆ. ಇವೆಲ್ಲ ಸಹಜ. ಮಲೆನಾಡಿಗರ ಹೋರಾಟದ ಇತಿಹಾಸ ಸರ್ಕಾರ ಅರ್ಥ ಮಾಡಿಕೊಂಡು ಮೆಲುಕು ಹಾಕಬೇಕಿದೆ. ರೈತರ ಹೋರಾಟಕ್ಕೆ ಆದಿ ಚುಂಚನಗಿರಿ ಶ್ರೀಮಠ ಬೆಂಬಲವಾಗಿದೆ ಎಂದರು.
ಇದನ್ನೂ ಓದಿ: ವಿದ್ಯುತ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಈ ಹೊಸ ನಿಯಮ ಪಾಲಿಸದಿದ್ದರೆ ಕರೆಂಟ್ ಕಟ್…!
ಶಾಸಕ ಟಿ. ಡಿ ರಾಜೇಗೌಡ ಮಾತನಾಡಿ, ಈ ಹೋರಾಟಕ್ಕೆ ಶಾಸಕನಾಗಿ ನಾನು ಬೆಂಬಲ ನೀಡಲಿದ್ದು, ಒತ್ತುವರಿ ತೆರವು ವಿಚಾರಕ್ಕೆ ನನ್ನ ಸಹಮತವಿಲ್ಲ. ಒತ್ತುವರಿ ಸಮಸ್ಯೆ ಬಗ್ಗೆ ಮಲೆನಾಡು ಭಾಗದ ಶಾಸಕರು, ಆಯ್ದ ಮುಖಂಡರ ಸಭೆ ಶೀಘ್ರ ಬೆಂಗಳೂರಿನಲ್ಲಿ ನಡೆಸಲಾಗುವುದು. ಈ ಹಿಂದೆಯೇ ಮಾತು ನೀಡಿದಂತೆ ಕ್ಷೇತ್ರದ ಪ್ರಮುಖ ರೈತ ಮುಖಂಡರನ್ನು ಸಹ ಒಂದುಗೂಡಿಸಿಕೊಂಡು ನಿಯೋಗ ತೆರೆಯಲಾಗುವುದು. ರೈತರ ಒಂದಿಂಚು ಭೂಮಿ ತೆರವು ಮಾಡಲು ಬಿಡಲ್ಲ. ಆದರೆ ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಮಾಡಲು ನನ್ನ ಸಹಮತವಿಲ್ಲ ಎಂದರು.
ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿನ ಕಂದಾಯ ಭೂಮಿಯನ್ನು 4(1) ನೋಟಿಫಿಕೇಶನ್ ಅಡಿಯಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಮೂಲಕ ಮಲೆನಾಡನ್ನು ಜನರಹಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಒತ್ತುವರಿ ಜಮೀನುಗಳನ್ನು ಮಂಜೂರಾತಿ, ಹಕ್ಕು ಪತ್ರದ ಭರವಸೆ ನೀಡಿರುವುದರಿಂದ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿವೆ. ಫಾರಂ ನಂ.50, 57ರಲ್ಲಿ ಅರ್ಜಿ ಸಲ್ಲಿಸಿದರೆ ಕಂದಾಯ ಭೂಮಿ ಆಗಿದ್ದರೆ ಮಾತ್ರ ರೈತರಿಗೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಯಾವುದೇ ಸರ್ಕಾರಿ ಭೂಮಿ ಒಂದು ಬಾರಿ ಅರಣ್ಯ ಎಂದು ನಮೂದಾದರೆ ಅದನ್ನು ಅರಣ್ಯೇತರ ಚಟುವಟಿಕೆಗೆ ಬಳಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದರು.
ಇದನ್ನೂ ಓದಿ: ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಉದ್ಯೋಗ; 10th, PUC ಪಾಸ್ ಆದವರು ಅರ್ಜಿ ಸಲ್ಲಿಸಿ; 13,000 ದಿಂದ ಸಂಬಳ
ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಕ್ಷೇತ್ರ ಅಧ್ಯಕ್ಷ ನಾಗೇಶ್ ಎಮ್ ಎನ್ ಮಾತನಾಡಿ, ಈ ಸಭೆಗೆ ಇಬ್ಬರು ಸ್ವಾಮೀಜಿತವರ ಉಪಸ್ಥಿತಿ ಮಲೆನಾಡಿನ ರೈತರಿಗೆ ಬಲ ಬಂದಂತಾಗಿದೆ, ಮಲೆನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಯಾರೇ ಪಕ್ಷಾತೀತವಾಗಿ ಹೋರಾಟ ರೂಪಿಸಿದರೂ ನಾವು ಕೈ ಜೋಡಿಸೋಣ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಮಟ್ಟದಲ್ಲಿ ಹೋರಾಟ ಕೈಗೊಂಡರೂ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ರೈತರ ಬದುಕಿನ ಉಳಿವಿಗಾಗಿ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ, ಈ ಹಿಂದೆ ಹೋರಾಟ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ, ಅದು ಈಡೇರಿದೆ ಇದ್ದ ಪಕ್ಷದಲ್ಲಿ ಹೋರಾಟದ ತಿರುವು ಶಾಸಕರು ಹಾಗೂ ಸಂಸದರ ಮನೆ ಕಡೆಗೆ ಹೋಗುತ್ತದೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತನಾಡಿ ಇದು ಮಲೆನಾಡಿಗರ ಬದುಕಿನ ಪ್ರಶ್ನೆ, ಯಾವುದೇ ರಾಜಕೀಯ ಪಕ್ಷ, ಸಂಘಟನೆಯವರು ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೂ ನಾವು ಅದನ್ನು ವಿರೋಧ ಮಾಡಬಾರದು, ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಈ ಹೋರಾಟಕ್ಕೆ ಬಲ ನೀಡಿದಂತೆ. ಹೋರಾಟದ ಮಾರ್ಗ ಅನಿವಾರ್ಯವಾಗಿದ್ದು ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ನಾವು ಬದ್ಧರಾಗಿರೋಣ ಎಂದರು.
ಇನ್ನು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲರು ಹಾಗೂ ರೈತ ಹೋರಾಟಗಾರಾದ ಶಿರಸಿಯ ರವೀಂದ್ರ ನಾಯಕ್ ಅವರು ತಮ್ಮ 33 ವರ್ಷಗಳ ಹೋರಾಟದ ಅನುಭವವನ್ನು ತೆರೆದಿಟ್ಟರು. ಕಾನೂನಿನ ತಿದ್ದುಪಡಿ ಇದಕ್ಕೆ ಪರಿಹಾರ ಅಲ್ಲ, ನಾವು ಜನಾಂದೋಲನ ರೂಪಿಸಿದಾಗ ಮಾತ್ರ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ, ನಾವು ಒಂದು ಭಾಗವಾಗಿ ಕಾನೂನು ಹೋರಾಟ ಕೈಗೊಳ್ಳಬೇಕು ಮತ್ತೊಂದು ಭಾಗವಾಗಿ ಪ್ರಬಲವಾಗಿ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಎಂದರು.
ಮಲೆನಾಡು ಕರಾವಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಿಲ್ ಹೊಸಕೊಪ್ಪ, ಸಂತೋಷ್ ಕಾಳ್ಯ, ರವೀಂದ್ರ ಕುಕ್ಕುಡಿಕೆ, ಅರವಿಂದ್ ಸಿಗದಾಳ್, ಕೆ.ಎಲ್ ಅಶೋಕ್, ಸಹ್ಯಾದ್ರಿ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರು, ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಗದೀಶ್ ಕಣದಮನೆ ಕಾರ್ಯಕ್ರಮಕ್ಕೂ ಮೊದಲು ರೈತ ಗೀತೆ ಹಾಡಿದರು.
ಇನ್ನು ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಈ ಕೆಳಗಿನಂತೆ ಇದೆ:
- ಪ್ರಾಕೃತಿಕ ಅವಘಡಗಳಿಗೂ ಮಲೆನಾಡಿನ ನೆಲವಾಸಿಗಳು ಸಂಬಂಧವಿಲ್ಲ, ಮೇಘ ಸ್ಪೋಟ-ಭೂಕುಸಿತಕ್ಕೆ ನಿವಾಸಿಗಳನ್ನು ಹೊಣೆ ಮಾಡುವುದು ವೈಜ್ಞಾನಿಕವಲ್ಲ, ಹವಾಮಾನ ವೈಪರೀತ್ಯಕ್ಕೆ ನಗರಿಕರಣ ಕಾರಣವೇ ಹೊರತು ಹಳ್ಳಿಗಳಲ್ಲ.
- ಮಲೆನಾಡಿನ ಸಮಸ್ಯೆಗೆ ಜನ ಹೋರಾಟವೇ ಅಸ್ತ್ರ.
- ಕರ್ನಾಟಕ ಅರಣ್ಯ ಕಾಯ್ದೆ ಕಲಂ 4ರಿಂದ 17ರವರೆಗಿನ ಅರಣ್ಯ ವ್ಯಾಖ್ಯಾನದ ಪ್ರಸ್ತಾವನೆ ಹಾಗೂ ನಿರ್ವಹಣೆ ಜನರ ಗಮನಕ್ಕೆ ತಂದು ಮತ್ತೊಮ್ಮೆ ಪುನರ್ ಸರ್ವೆ ನಡೆಸಿ ನೆಲವಾಸಿಗಳ ರಸ್ತೆ, ಕೃಷಿ, ವಾಸಸ್ಥಳ, ಭವಿಷ್ಯದ ನಿವೇಶನಗಳ ವಿತರಣೆಗೆ ಅರಣ್ಯ ಘೋಷಣೆ ವ್ಯಾಖ್ಯಾನದಿಂದ ಹೊರಗುಳಿಸಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು.
- ಪಾರಂಪರಿಕ ಅರಣ್ಯ ಕಾಯ್ದೆಯಡಿ ಭೂ ಮಂಜೂರಾತಿ ಕಾಲಮಿತಿ ಅವಶ್ಯಕ ದಾಖಲೆಗಳನ್ನು 75 ವರ್ಷಗಳಿಂದ 25 ವರ್ಷಕ್ಕೆ ತಗ್ಗಿಸಿ ಅರಣ್ಯ ವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡಬೇಕು.
- ಭೂ ಪರಿಮಿತಿ ಆಧಾರದಲ್ಲಿ ವಿಧಾನಸಭೆ, ಲೋಕಸಭೆ ಕ್ಷೇತ್ರ ಪುನರ್ ವಿಂಗಡಿಸುವುದು.
- ಮಲೆನಾಡನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಿ, ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಒಪ್ಪಿಕೊಳ್ಳುವುದು ಹಾಗೂ ಹುಲಿ ಯೋಜನೆ ವಿಸ್ತರಣೆಗೆ ಜನರ ಎತ್ತಂಗಡಿ ಅಥವಾ ನೆಲವಾಸಿಗಳಿಗೆ ತೊಂದರೆಯಾಗುವ ಎಲ್ಲಾ ಪ್ರಸ್ತಾವನೆ ಅಮೂಲಾಗ್ರವಾಗಿ ಪರಿಶೀಲಿಸಿ ಸರ್ಕಾರ ಕೈಬಿಡಬೇಕು.
- ಅರಣ್ಯ ಕಾಯ್ದೆ ಸೆಕ್ಷನ್ 4 ಉದ್ಘೋಷಣೆ ಗ್ರಾಮ ಸಭೆಗಳ ಪೂರ್ವಾನುಮತಿ ಪಡೆಯದಿರುವುದರಿಂದ ಸಂಪೂರ್ಣ ವಾಪಾಸ್ ಪಡೆಯಬೇಕು.
- ಪ್ರತೀ ವರ್ಷ ಏ.15 ಅನ್ನು ಮಲೆನಾಡು ದಿನ ಆಚರಿಸಿ, ಜನಜೀವನ, ಕೃಷಿ, ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು.
- ಪ್ರಸ್ತುತ ಇರುವ ಹುಲಿ ಅರಣ್ಯ ಯೋಜನೆ, ರಾಷ್ಟ್ರೀಯ ಉದ್ಯಾನ ಅಥವಾ ಇನ್ನಾವುದೇ ಮೀಸಲು ಅರಣ್ಯ ವಿಸ್ತರಿಸಬಾರದು ಎಂದು ಮಲೆನಾಡು-ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಮಲೆನಾಡಿಗರ ಸಮಸ್ಯೆ ಕುರಿತು ಮಲೆನಾಡಿಗರ ಮಹತ್ವದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.












