ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಡಂಚಿನ ಹಳ್ಳಿಗಳ ಜನರಿಗೆ ಉಪಟಳ ನೀಡುತ್ತಿದ್ದ ಕಾಡಾನೆಗಳು ಈಗ ಚಿಕ್ಕಮಗಳೂರು ನಗರದ ಸಮೀಪಕ್ಕೆ ಬಂದು ದಾಂಗುಡಿ ಇಡಲು ಆರಂಭಿಸಿವೆ. ನಗರದ ಹೊರ ವಲಯದ ಅಂಬರ್ ವ್ಯಾಲಿ ಶಾಲೆಗೆ ಹೊಂದಿಕೊಂಡಂತೆ ಇರುವ ಅರಣ್ಯದಲ್ಲಿ 22 ಆನೆಗಳು ಬಂದಿವೆ.
ಇದನ್ನೂ ಓದಿ; ನಿಮ್ಮ ವಾಹನದ ಫಾಸ್ಟ್ ಟ್ಯಾಗ್ KYC ಆಗಿದ್ಯಾ?;ಈ ದಿನದೊಳಗೆ ಫಾಸ್ಟ್ ಟ್ಯಾಗ್ ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್ ಲೈನ್

9 ಗ್ರಾಮಗಳಿಗೆ 144 ಸೆಕ್ಷನ್ ಜಾರಿ:
ಕಾಡಾನೆಗಳು ಬೀಡು ಬಿಟ್ಟಿರುವುದರಿಂದ ಸುತ್ತಮುತ್ತಲ 9 ಗ್ರಾಮಗಳಿಗೆ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಜಾರಿ ಮಾಡಿದೆ. ಮೂಗ್ತಿಹಳ್ಳಿ, ಅದಿಶಕ್ತಿನಗರ, ಮತ್ತಾವರ, ರಾಂಪುರ, ತೇಗೂರು, ಕಂಬದಹಳ್ಳಿ, ದುಮ್ಮಿಗೆರೆ, ಗವನಹಳ್ಳಿ, ನಲ್ಲೂರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಮಗಳೂರು ಎ.ಸಿ. ದಲ್ಜೀತ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ; ಶಿವಮೊಗ್ಗ GTTC ಯಲ್ಲಿ ಉದ್ಯೋಗವಕಾಶ; ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಏನು?
ವಸತಿ ಶಾಲೆಗೂ ನಿಷೇದಾಜ್ಞೆ ಜಾರಿ:
ಖಾಸಗಿ ವಸತಿ ಶಾಲೆಯಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟ ಹಿನ್ನೆಲೆ ಜಿಲ್ಲಾಡಳಿತದಿಂದ ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆ 10 ಗಂಟೆವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು.
ಕಾರ್ಯಾಚರಣೆಗೆ ಎಂಟು ಸಾಕಾನೆ:
ಈ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ ಎಂಟು ಸಾಕಾನೆಗಳನ್ನು ಅರಣ್ಯ ಇಲಾಖೆ ತೊಡಗಿಸಿಕೊಂಡಿದೆ. ದುಬಾರೆ ಆನೆ ಶಿಬಿರ ಮತ್ತು ನಾಗರಹೊಳೆ ಆನೆ ಶಿಬಿರದಿಂದ ತಲಾ ನಾಲ್ಕು ಆನೆಗಳನ್ನು ಕರೆಸಿಕೊಳ್ಳಲಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಬಳಿಕ ಕಾರ್ಯಚರಣೆ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ಬಳಿಕ ಕಾರ್ಯಚರಣೆ ಆರಂಭಿಸುವ ಸಾಧ್ಯತೆ ಇದೆ. ಸದ್ಯ, ಕಾಡಾನೆ ಚಲನೆಯ ಮೇಲೆ ನಿಗಾ ಇಟ್ಟಿರುವ ಅರಣ್ಯ ಇಲಾಖೆಯು ಬಂದ ದಾರಿಯಲ್ಲೇ ಅವುಗಳನ್ನು ವಾಪಸ್ ಕಳಿಸಲು ಪ್ಲಾನ್ ಮಾಡಿಕೊಂಡಿದೆ.
ಕಾಡಿನ ನಡುವೆ ತೇಜಸ್ವಿ ಕೃತಿಗಳ ಓದು
ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಸದಾ ಪ್ರವಾಸಿಗರಿಂದ ಗಿಜಿಗುಡುವ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಶನಿವಾರ ಪರಿಸರ ಸಂರಕ್ಷಣೆಯ ಕುರಿತು ತೇಜಸ್ವಿ ಅವರ ಕೃತಿಗಳ ಓದಿನ ಸದ್ದು ಎಲ್ಲೆಡೆ ಮನೆ ಮಾಡಿತ್ತು.
ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಆಯೋಜಿಸಿದ್ದ ಕಾಡಿನಲ್ಲಿ ಓದು ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಚಾರಣಿಗರು ಸುತ್ತ ಕಣ್ಣು ಆಯಿಸಿದಷ್ಟು ದೂರವೂ ಹಬ್ಬಿರುವ ಹಸಿರು ಅರಣ್ಯದ ನಡುವೆ ಒಂದೆಡೆ ಸೇರಿ ತೇಜಸ್ವಿ ಕೃತಿಗಳ ಕೆಲ ಸಾಲುಗಳನ್ನು ಓದಿದರು.
ಕೀಟತಜ್ಞರಾದ ಮೂಡಿಗೆರೆಯ ಅವಿನಾಶ್ ಮಾತನಾಡಿ, ಪರಿಸರದ ಬಗ್ಗೆ ಬೆರಗು ಮತ್ತು ಪರಿಸರದ ಉಳಿವಿನ ಮಹತ್ವವನ್ನು ತೇಜಸ್ವಿ ಅವರು ತಮ್ಮ ಬಹುತೇಕ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ತೇಜಸ್ವಿ ಕೃತಿಗಳಿಂದಾಗಿ ಹೊಸದೊಂದು ಓದುಗ ವರ್ಗ ಸೃಷ್ಠಿಯಾಗಿ ಓದಿನ ರುಚಿ ಎಲ್ಲರಲ್ಲೂ ಮೂಡುತ್ತಿದೆ. ಪರಿಸರ, ಜೀವಸಂಕುಲ, ಬಾಹ್ಯಾಕಾಶ, ಮುಂತಾದ ವಿಷಯಗಳ ಬಗ್ಗೆ ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದರು.
ಮಂಡ್ಯದ ಅಂಶು ಅವರು ಪರಿಸರದ ಕಥೆ, ಚಿಕ್ಕಮಗಳೂರಿನ ಕಾರ್ತಿಕ್ ಎಂ.ಕೆ ಹುಲಿಯೂರಿನ ಸರಹದ್ದು, ದೀಪಗೌಡ ಅವರು ಪಾಕಕ್ರಾಂತಿ, ತುಮಕೂರಿನ ಪಲ್ಲವಿ ರಂಗನಾಥ್ ಮಾಯಾಲೋಕ, ಚಿತ್ರದುರ್ಗದ ದಿನೇಶ್ ಕೆ.ಎಸ್ ಅವರು ಮಿಸ್ಸಿಂಗ್ ಲಿಂಕ್, ಬೆಂಗಳೂರಿನ ಪ್ರೇಮ ಅವರು ಹೆಜ್ಜೆ ಮೂಡದ ಹಾದಿ, ಬೆಂಗಳೂರಿನ ಸುನಿತಾ ಮತ್ತು ವಿನೋದ್ ಅವರು ವಿಸ್ಮಯ ವಿಶ್ವ, ಶಿರಾದ ಶ್ರೀನಾಥ್ ಅವರು ಪಾಕಕ್ರಾಂತಿ, ಮೂಡಿಗೆರೆಯ ಅವಿನಾಶ್ ಅವರು ಪಾಕಕ್ರಾಂತಿ, ನಂದೀಶ್ ಬಂಕೇನಹಳ್ಳಿ ಅವರು ಕರ್ವಾಲೊ, ಕೃತಿಯನ್ನು ಓದಿದರು. ಚಿಕ್ಕಮಗಳೂರಿನ ಸತ್ಯನಾರಾಯಣ, ಓಂಕಾರಪ್ಪ, ಹಾಸನದ ಬಾಲು ತೇಜಸ್ವಿ ಅವರ ಬದುಕು ಬರಹದ ಕುರಿತು ಚರ್ಚೆ ನಡೆಸಿದರು.
ಪರಿಸರದ ಸಂರಕ್ಷಣೆ, ತೇಜಸ್ವಿ ಅವರ ಬದುಕು, ಬರಹಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಕಾಡಿನಲ್ಲಿ ಓದು ಕಾರ್ಯಕ್ರಮಕ್ಕೂ ಮುನ್ನ ರಾಣಿಝರಿಯಿಂದ ಬಲ್ಲಾಳರಾಯನ ದುರ್ಗಕ್ಕೆ ಚಾರಣ ನಡೆಸಲಾಯಿತು. ಕೀಟತಜ್ಞರಾದ ಅವಿನಾಶ್ ಅವರು ಕೀಟಗಳ ಬಗ್ಗೆ ಮಾಹಿತಿ ನೀಡಿದರು. ಪ್ಲಾಸ್ಟಿಕ್ ನ್ನು ಎಲ್ಲಿಯೂ ಬಳಕೆ ಮಾಡದೇ ಪ್ಲಾಸ್ಟಿಕ್ ಮುಕ್ತ ಚಾರಣ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಕೀಟ ತಜ್ಞರಾದ ಅವಿನಾಶ್, ತೇಜಸ್ವಿ ಅವರ ಒಡನಾಡಿ ಹಾಗೂ ಕಲಾವಿದರಾದ ಬಾಪುದಿನೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಭಿಲಾಷ್, ಚಂದನ್ ಸಿಬ್ಬಂದಿ ಭವಿತ್ ಹಾಗೂ ರಾಜ್ಯದ ವಿವಿದೆಡೆಯಿಂದ ಆಗಮಿಸಿದ 40 ಕ್ಕೂ ಹೆಚ್ಚು ಚಾರಣಿಗರು ಇದ್ದರು.












