ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ ಇ-ಮೇಲ್ಗಳು ಬರುತ್ತಿರುವ ಬೆನ್ನಲ್ಲೇ, ಇದೀಗ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ಅಪರಿಚಿತರಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಮಧ್ಯಾಹ್ನ 1.30ರಿಂದ 3.30ರ ಅವಧಿಯಲ್ಲಿ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಸಂದೇಶ ದೊರೆಯುತ್ತಿದ್ದಂತೆಯೇ ನ್ಯಾಯಾಲಯದ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಕೂಡಲೇ ಪೊಲೀಸ್ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಧಾವಿಸಿ, ಬಿಗಿ ಭದ್ರತೆಯ ನಡುವೆ ಶೋಧ ಕಾರ್ಯಾಚರಣೆ ಆರಂಭಿಸಿದರು. ನ್ಯಾಯಾಲಯದ ದೈನಂದಿನ ಕಲಾಪಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಇಡೀ ಕೋರ್ಟ್ ಆವರಣವನ್ನು ಸುತ್ತುವರಿದು ತಪಾಸಣೆ ನಡೆಸಿದರು. ವಾಹನ ನಿಲುಗಡೆ ಪ್ರದೇಶ ಸೇರಿದಂತೆ ಪ್ರತಿಯೊಂದು ಸ್ಥಳವನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು.
ಇದೇ ವೇಳೆ ನ್ಯಾಯಾಲಯಕ್ಕೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ಕಕ್ಷಿದಾರರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿದ ಬಳಿಕವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಹಲವು ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ನಂತರ ಎಲ್ಲಿಯೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಸ್ಪಷ್ಟವಾಯಿತು.
ಇತ್ತೀಚೆಗೆ ಹಾವೇರಿ, ಮಂಡ್ಯ, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಗಳಿಗೂ ಇದೇ ಮಾದರಿಯ ಬೆದರಿಕೆ ಇ-ಮೇಲ್ಗಳು ಬಂದಿದ್ದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿದ ಇ-ಮೇಲ್ನ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












