ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 2023ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕುರಿತು ಸಂಪೂರ್ಣ ತನಿಖೆ ನಡೆಸಬೇಕೆಂದು ಬಿಜೆಪಿ ಶೃಂಗೇರಿ ಮಂಡಲದಿಂದ ಒತ್ತಾಯಿಸಿದ್ದಾರೆ.
2023ರ ಮೇ 23ರಂದು ನಡೆದ ಮತ ಎಣಿಕೆ ಸಂದರ್ಭ ರಾಜ್ಯದ ಇತರೆ 223 ಕ್ಷೇತ್ರಗಳಲ್ಲಿ ಅಂಚೆ ಮತಪತ್ರಗಳ ಎಣಿಕೆ ಮೊದಲು ನಡೆದಿದ್ದರೆ, ಶೃಂಗೇರಿ ಕ್ಷೇತ್ರದಲ್ಲಿ ಮಾತ್ರ ಇ.ವಿ.ಎಂ. ಮತ ಎಣಿಕೆಯ ನಂತರ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಿ, ಅದನ್ನೂ ಅರ್ಧದಲ್ಲಿ ನಿಲ್ಲಿಸಲಾಗಿತ್ತು.

ಈ ಕುರಿತು ಅಭ್ಯರ್ಥಿಯೊಬ್ಬರು ಪ್ರಬಲ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದ್ದರೂ ಅದನ್ನು ಪರಿಗಣಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಅಂದು ನಡೆದ ಮತ ಎಣಿಕೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯಾಸತ್ಯತೆ ಹೊರಬರಲಿದೆ. ಮರುಎಣಿಕೆ ಕೇಳಿದ್ದರೂ ಅದನ್ನು ಏಕೆ ನಿರಾಕರಿಸಲಾಯಿತು, ಮರುಎಣಿಕೆ ನಡೆಯಬಾರದು ಎಂದು ಸುಪ್ರೀಂ ಕೋರ್ಟ್‌ಗೆ ಹೋಗಿದ್ದ ಉದ್ದೇಶವೇನು ಎಂಬುದಕ್ಕೂ ಸಾರ್ವಜನಿಕರಿಗೆ ಉತ್ತರ ನೀಡಬೇಕಿದೆ.


ಈ ಎಲ್ಲ ಬೆಳವಣಿಗೆಗಳಿಂದ ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರಲ್ಲಿ ಸಹಜ ಅನುಮಾನಗಳು ಮೂಡಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಬಿಜೆಪಿ ಶೃಂಗೇರಿ ಮಂಡಲದಿಂದ ಒತ್ತಾಯಿಸಿದ್ದಾರೆ.













