
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದ ಬಳಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಕಾಮಗಾರಿ ಒಂದೇ ವಾರದಲ್ಲಿ ಹದಗೆಟ್ಟಿರುವುದು ಗುಣಮಟ್ಟದ ಕಾಮಗಾರಿಗಳ ಮೇಲಿನ ಅನುಮಾನವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ

ಸಬ್ಬೇನಹಳ್ಳಿ–ಗುತ್ತಿ–ಮೂಲರಹಳ್ಳಿ ಮಾರ್ಗವಾಗಿ ಪ್ರವಾಸಿ ತಾಣ ದೇವರಮನೆ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಈ ರಸ್ತೆ ಸುಮಾರು 3 ಕಿ.ಮೀ. 800 ಮೀಟರ್ ಉದ್ದವಿದೆ. ಕಾಮಗಾರಿ ಪೂರ್ಣಗೊಂಡು ವಾರವೂ ಕಳೆಯುವ ಮುನ್ನವೇ ರಸ್ತೆಯ ಮೇಲ್ಭಾಗದ ಡಾಮರ್ ಹಾಗೂ ಜಲ್ಲಿ ಪುಡಿ ಕಿತ್ತುಬಂದು ರಸ್ತೆ ಸಂಪೂರ್ಣ ಹದಗೆಟ್ಟಿದೆ.

ರಸ್ತೆ ಮೇಲೆ ಜಲ್ಲಿ ಹರಡಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದ್ದು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜೀವಭಯದೊಂದಿಗೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸದಾಗಿ ನಿರ್ಮಿಸಿದ ರಸ್ತೆ ಈ ರೀತಿ ಕುಸಿದಿರುವುದು ಕಂಟ್ರಾಕ್ಟರ್ ಹಾಗೂ ಸಂಬಂಧಿಸಿದ ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದಲೇ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ
ಇನ್ನೂ ರಸ್ತೆ ಗುಣಮಟ್ಟವನ್ನು ಸಮರ್ಪಕವಾಗಿ ಪರಿಶೀಲಿಸದೇ ಕಾಮಗಾರಿ ಅನುಮೋದನೆ ನೀಡಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಹಣ ಮಣ್ಣುಗೂಡುತ್ತಿರುವುದರ ಬಗ್ಗೆ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣವೇ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಹದಗೆಟ್ಟ ರಸ್ತೆಯನ್ನು ಮರುಕಾಮಗಾರಿ ಮೂಲಕ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
















