
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಭಾನುವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಂಡಿದ್ದ ನೂತನ ಸೇತುವೆಯ ಬಳಿಯೇ ಭೀಕರ ದುರಂತವೊಂದು ಸಂಭವಿಸಿದೆ.
ಭದ್ರಾ ನದಿಯ ಬ್ಯಾಕ್ ವಾಟರ್‌ನಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಂತೂರು ಬಳಿ ಇರುವ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ‘ಸಿದ್ದರಾಮಯ್ಯ ಸೇತುವೆ’ ಬಳಿ ಈ ಘಟನೆ ನಡೆದಿದೆ.

ಸಿಗುವಾನಿ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿ, ತನ್ನ ಇಬ್ಬರು ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನ ಮಾಡಲು ಸೇತುವೆಯ ಕೆಳಭಾಗಕ್ಕೆ ಇಳಿದಿದ್ದರು. ಒಟ್ಟು ಮೂವರು ವ್ಯಕ್ತಿಗಳು ನದಿಗೆ ಇಳಿದಿದ್ದು, ಸ್ನಾನದ ನಂತರ ಇಬ್ಬರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಇವರ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ಶಂಕಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ನಾಪತ್ತೆಯಾದ ವ್ಯಕ್ತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ನದಿಯ ನೀರಿನ ಮಟ್ಟ ಹೆಚ್ಚಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.













