ಶೃಂಗೇರಿ ಕ್ಷೇತ್ರದಲ್ಲಿ 15 ಸಾವಿರ ಮತದಾರರು ಪಟ್ಟಿಯಿಂದ ಹೊರಗೆ – ಅನಿಲ್ ಹೊಸಕೊಪ್ಪ ಆರೋಪ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಶೃಂಗೇರಿ ಕ್ಷೇತ್ರದ ಸುಮಾರು 15 ಸಾವಿರ ಮತದಾರರನ್ನು ಕೈಬಿಟ್ಟಿರುವ ಸಾಧ್ಯತೆಯಿದ್ದು, ಕ್ಷೇತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕಾಂಗ್ರೆಸ್ ಮುಖಂಡ ಅನಿಲ್ ಹೊಸಕೊಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 1.32 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿರುವುದಾಗಿ ಆರೋಪಿಸಿದ್ದಾರೆ. ರಾಜ್ಯದಾದ್ಯಂತ ಸುಮಾರು 70 ಲಕ್ಷ ಮತದಾರರನ್ನು ಮ್ಯಾಪಿಂಗ್‌ನಿಂದ ಹೊರಗಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

“ಒಮ್ಮೆ ಮ್ಯಾಪಿಂಗ್ ಪ್ರಕ್ರಿಯೆಯಿಂದ ಹೆಸರು ಹೊರಗುಳಿದರೆ, ಬಳಿಕ ವಿವಿಧ ದಾಖಲೆಗಳನ್ನು ಸಲ್ಲಿಸಿದ ನಂತರವೇ ಮತದಾರರ ಪಟ್ಟಿಗೆ ಮರು ಸೇರ್ಪಡೆ ಸಾಧ್ಯವಾಗುತ್ತದೆ. ಆದರೆ ಈ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಹೀಗಾಗಿ ಕ್ಷೇತ್ರದ ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಬೇಕು” ಎಂದು ತಿಳಿಸಿದ್ದಾರೆ.

ಮ್ಯಾಪಿಂಗ್ ಪ್ರಕ್ರಿಯೆಯ ಬಳಿಕ ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಪರಿಶೀಲನೆ ನಡೆಯಲಿದ್ದು, ಆಗಲೂ ದಾಖಲೆಗಳನ್ನು ಒದಗಿಸುವ ಅಗತ್ಯ ಎದುರಾಗಬಹುದು ಎಂದು ಅವರು ಹೇಳಿದ್ದಾರೆ. “ಹೆಸರಿನಲ್ಲಿ ಅಕ್ಷರದ ತಪ್ಪಿದ್ದರೂ ಸಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು.

ಸ್ವಾತಂತ್ರ್ಯಾನಂತರ ಭಾರತದಲ್ಲಿ ನಾಲ್ಕು ಬಾರಿ ಎಸ್‌ಐಆರ್ ನಡೆದಿದ್ದು, ಹಿಂದಿನ ಪರಿಷ್ಕರಣೆಗಳ ಉದ್ದೇಶ ಹೆಚ್ಚು ಹೆಚ್ಚು ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವುದಾಗಿತ್ತು. ಆದರೆ ಈಗ ನಡೆಯುತ್ತಿರುವ ಪ್ರಕ್ರಿಯೆ ಮತದಾರರನ್ನು ಹೊರಗಿಟ್ಟು ಮತಗಳನ್ನು ಕಡಿಮೆ ಮಾಡುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುವ ತಂತ್ರವಾಗಿದೆ ಎಂದು ಅನಿಲ್ ಹೊಸಕೊಪ್ಪ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮುಖ್ಯಸ್ಥರಾಗಿದ್ದವರನ್ನೇ ನಂತರ ಮುಖ್ಯಮಂತ್ರಿ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಉದಾಹರಣೆಯನ್ನು ಉಲ್ಲೇಖಿಸಿದ ಅವರು, “ಪ್ರತಿಯೊಬ್ಬ ಮತದಾರನ ಹೆಸರು ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವುದು ಬಿಎಲ್‌ಒಗಳ ಜವಾಬ್ದಾರಿ” ಎಂದು ಹೇಳಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.