ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಬೆರಣಗೋಡು ಗ್ರಾಮದಲ್ಲಿ ವಿದ್ಯುತ್ ಕಂಬದಿಂದ ಪ್ರವಹಿಸಿದ ವಿದ್ಯುತ್ ತಗುಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆರಣಗೋಡು ಗ್ರಾಮದ ನಿವಾಸಿ ಪ್ರಶಾಂತ್ (38) ಗಾಯಗೊಂಡ ದುರ್ದೈವಿ.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ಸುಮಾರು ಎರಡು ದಿನಗಳ ಹಿಂದೆ ಅಲ್ದೂರು ಮೆಸ್ಕಾಂ ವ್ಯಾಪ್ತಿಗೆ ಸೇರಿದ ಸಿಬ್ಬಂದಿ, ಗ್ರಾಮದಲ್ಲಿ ಹೊಸ ವಿದ್ಯುತ್ ಲೈನ್ ಮತ್ತು ಹೊಸ ಕಂಬಗಳನ್ನು ಅಳವಡಿಸಿದ್ದರು. ಈ ಕಾಮಗಾರಿಯಲ್ಲಾದ ಲೋಪದೋಷಗಳು ಇಂದು ಪ್ರಶಾಂತ್ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.

ತಮ್ಮ ಮನೆಯ ಹಿಂಭಾಗದಲ್ಲಿ ನಿಂತಿದ್ದ ಸಂದರ್ಭದಲ್ಲಿ, ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಹೊಸ ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ. ಇದರಿಂದ ತೀವ್ರ ವಿದ್ಯುತ್ ಶಾಕ್‌ಗೆ ಒಳಗಾದ ಪ್ರಶಾಂತ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.
ಅಪಾಯದ ಸ್ಥಿತಿಯಲ್ಲಿದ್ದ ಪ್ರಶಾಂತ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
ಹೊಸ ಲೈನ್ ಮತ್ತು ಕಂಬಗಳನ್ನು ಅಳವಡಿಸಿದ ಕೆಲವೇ ದಿನಗಳಲ್ಲಿ ಇಂತಹ ದುರ್ಘಟನೆ ಸಂಭವಿಸಿರುವುದು ಮೆಸ್ಕಾಂನ ಗುಣಮಟ್ಟದ ಕೆಲಸದ ಬಗ್ಗೆ ಸಂಶಯ ಮೂಡಿಸಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿ ನಡೆಸಿದ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.













