ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಳೆ ಪ್ರಮಾಣ ಕಡಿಮೆಯಾದರೂ ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶದಲ್ಲಿ ಅವಾಂತರಗಳು ನಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಮುಳ್ಳಯ್ಯನಗಿರಿ ಮಾರ್ಗದಲ್ಲಿ ಪ್ರವಾಸಿ ಬೈಕ್ ಮೇಲೆ ಮರ ಬಿದ್ದ ಘಟನೆ ಸಂಭವಿಸಿದ್ದು, ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಚನ್ನಗೋಡನಹಳ್ಳಿ ಸಮೀಪ ಈ ಘಟನೆ ನಡೆದಿದೆ. ಭಾರೀ ಗಾಳಿಯ ಪರಿಣಾಮ ಮರ ಬುಡಸಮೇತ ಉರುಳಿಬಿದ್ದಿದ್ದು, ಮರದ ತುದಿ ಭಾಗ ಮಾತ್ರ ಬೈಕ್ ಮೇಲೆ ಬಿದ್ದಿದ್ದರಿಂದ ಸವಾರ ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿದ್ದಾನೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು, ಹಲವು ಕಡೆ ಧರೆ ಕುಸಿತ ಉಂಟಾಗುತ್ತಿದೆ. ಈಗಾಗಲೇ ಮುಳ್ಳಯ್ಯನಗಿರಿ–ದತ್ತಪೀಠ ಮಾರ್ಗದ ಕೆಲವೆಡೆ ರಸ್ತೆ ಬದಿಯ ಮಣ್ಣು ಜಾರಿರುವುದು ಪ್ರಯಾಣಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ತೆರಳುವ ಪ್ರವಾಸಿಗರು ಮತ್ತು ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.













