
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜಯ ಭಾರತೀ ವಿದ್ಯಾಲಯ, ಶೃಂಗೇರಿಯಲ್ಲಿ ಇಂದು ಪೂರ್ವ ಪ್ರಾಥಮಿಕ (Pre-KG) ಯಿಂದ 4ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಡಾ. ಹೆಚ್.ಜಿ. ಲಕ್ಷ್ಮೀನಾರಾಯಣ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಶಾರದಾ ಶಿಶು ಕೇಂದ್ರ, ಶೃಂಗೇರಿಯ ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮಿ ವಿಘ್ನೇಶ್ ಅವರು ಆಗಮಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವಿನಯ್ ಸಿ.ಜಿ. ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆಯ ತೀರ್ಪುಗಾರರಾಗಿ ಶೃಂಗೇರಿಯ ನಿವೃತ್ತ ಶಿಕ್ಷಕರಾದ ಶ್ರೀ ಭಾಸ್ಕರ್, ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಭಾಗ್ಯಶ್ರೀ ಹಾಗೂ ಕೊಪ್ಪದ ಶ್ರೀಮತಿ ಮಂಗಳ ಪ್ರವೀಣ್ ಅವರು ಭಾಗವಹಿಸಿ, ವಿದ್ಯಾರ್ಥಿಗಳ ವೇಷಭೂಷಣ ಹಾಗೂ ಅಭಿನಯವನ್ನು ಆಧರಿಸಿ ತೀರ್ಪು ನೀಡಿದರು.

ಸ್ಪರ್ಧೆಯಲ್ಲಿ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ವಿವಿಧ ಆಕರ್ಷಕ ವೇಷಭೂಷಣಗಳನ್ನು ಧರಿಸಿ, ತಮ್ಮ ಅದ್ಭುತ ಅಭಿನಯದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಮಕ್ಕಳ ಪ್ರತಿಭೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲೆಯ ವತಿಯಿಂದ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ಕು. ರಂಜಿತ ಸ್ವಾಗತಿಸಿದರೆ, ಕು. ಸಾವರ್ಣಿ ಹಾಗೂ ಕು. ಪುಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಅನಘ ವಂದನಾರ್ಪಣೆ ಸಲ್ಲಿಸಿದರು.
ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮತ್ತು ವೇದಿಕೆಯ ಮೇಲಿನ ಧೈರ್ಯವನ್ನು ಬೆಳೆಸುವಲ್ಲಿ ಈ ಛದ್ಮವೇಷ ಸ್ಪರ್ಧೆ ಯಶಸ್ವಿಯಾಯಿತು.













