
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕ್ಕುಡಿಗೆ ಗ್ರಾಮದ ದಿ.ಶಿವಪ್ಪ ಮತ್ತು ದಿ.ಕಮಲಮ್ಮ ದಂಪತಿಗಳ ಪುತ್ರ ಸಿ.ಎಸ್.ಜಯರಾಂ ಅವರು, ಭಾರತೀಯ ಸೇನೆಯಲ್ಲಿ ಲೆಪ್ಟಿನೆಂಟ್ ಕರ್ನಲ್ ಆಗಿ ಸೇನಾ ಕರ್ತವ್ಯದಲ್ಲಿ ನಿರತರಾಗಿ ಮೇ 31 ರಂದು ನಿವೃತ್ತರಾಗಿದ್ದಾರೆ. ಅವರನ್ನು ಸೇನಾ ಗೌರವದೊಂದಿಗೆ ಬೀಳ್ಕೊಟ್ಟ ನಂತರ ಅವರ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಕೇಂದ್ರ ಸರ್ಕಾರ ಇನ್ನು 4 ವರ್ಷ ಸೇವೆಯನ್ನು ಮುಂದುವರೆಸಿದ್ದರಿಂದ ಉತ್ತರಪ್ರದೇಶದ ಬರೇಲಿಯಲ್ಲಿ ಕರ್ತವ್ಯಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ನ್ಯೂಸ್; ಏನದು? ಇಲ್ಲಿದೆ ನೋಡಿ

ಜಯರಾಂ ಅವರು 1990ರಲ್ಲಿ 19ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರಿದ್ದಾರೆ. ಸೇನಾ ಕರ್ತವ್ಯದಲ್ಲಿದ್ದ ವೇಳೆ ಉನ್ನತ ಶಿಕ್ಷಣ ಪಡೆದು ಸೇನಾಧಿಕಾರಿಯಾಗಿ ಕಳೆದ 35 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೇನೆಯಲ್ಲಿ ಅವರು ಲೆಫ್ಟಿನೆಂಟ್ ಮತ್ತು ಕ್ಯಾಪ್ಟನ್ ದರ್ಜೆಯ ಮೇಜರ್ ಹುದ್ದೆಗಳನ್ನು ಪಡೆದು ಇದುವರೆಗೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

35 ವರ್ಷದ ಕರ್ತವ್ಯದ ಅವಧಿಯಲ್ಲಿ ಲೇಹ್-ಲಡಾಕ್, ಜಮ್ಮು-ಕಾಶ್ಮೀರ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ಸೇವೆಯಲ್ಲಿದ್ದಾಗ ಆಪರೇಷನ್ ವಿಜಯ್, ಆಪರೇಷನ್ ಪರಾಕ್ರಮ, ಆಪರೇಷನ್ ರಕ್ಷಕ್, ಕೌಂಟರ್ ಇನ್ಸರ್ಜನ್ಸಿ, ಕೌಂಟರ್ ಟೆರರಿಸಂ ಮತ್ತು ಆಪರೇಷನ್ ಸಿಂಧೂರ್ ನಲ್ಲಿ ಪ್ರಮುಖವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಉನ್ನತ ಹುದ್ದೆಯಲ್ಲಿರುವ ಸಿ.ಎಸ್.ಜಯರಾಂ ಅವರು ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದವರು. ಅವರ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನ ಬಡತನದಿಂದ ಕೂಡಿತ್ತು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಅವರ ಹುಟ್ಟೂರಾದ ಚಕ್ಕುಡಿಗೆ ಗ್ರಾಮದಲ್ಲಿ ಮತ್ತು ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸಕಲೇಶಪುರ ತಾಲೂಕಿನ ಹಾನುಬಾಳು ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಡೆಡಿದ್ದಾರೆ.
ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಸಿಹಿಸುದ್ದಿ; ಜನಸೇವಕ ಮೂಲಕ ಮನೆಯಿಂದಲೇ ಇ-ಖಾತೆ ಪಡೆಯಲು ಅವಕಾಶ!
ಪಿಯುಸಿ ಶಿಕ್ಷಣವನ್ನು ಹಾಸನದ ಖಾಸಗಿ ಕಾಲೇಜಿನಲ್ಲಿ ಪಡೆದು ನಂತರ ಚಿಕ್ಕಮಗಳೂರಿನ ಈಎಸಿಜಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಕೋರ್ಸ್ ಜೊತೆಗೆ ಎನ್ ಸಿಸಿಯಲ್ಲಿ ಕೂಡ ಪ್ರವೇಶ ಪಡೆಡಿದ್ದರು. ಬಡತನದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಸೇನೆಗೆ ಸೇರಿ ದೇಶಸೇವೆ ಮಾಡಬೇಕು ಎಂಬುದು ಅವರಿಗೆ ಸದಾ ಕಾಡುತ್ತಿತ್ತು. ಬೆಂಗಳೂರಿನಲ್ಲಿ ವಾಯುಸೇನೆ ಹಾಗೂ ನೌಕಾಸೇನೆಗೆ ಸೇರುವ ಪ್ರಯತ್ನ ನಡೆಸಿ ವಿಫಲವಾಗಿ ಕೊನೆಗೆ ಮಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಭೂಸೇನೆಗೆ ಆಯ್ಕೆಯಾಗಿದ್ದರು.
ಸೇನೆಗೆ ಸೇರಿದ ಬಳಿಕ 2 ವರ್ಷ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದು ಪಶ್ಚಿಮ ಬಂಗಾಳದಲ್ಲಿ ಸೇವೆಗೆ ನಿಯೋಜನೆಗೊಳ್ಳುತ್ತಾರೆ. ಸೇನಾಧಿಕಾರಿಯಾಗಬೇಕೆಂಬ ಹಂಬಲದಿಂದ ಸತತ ಪ್ರಯತ್ನ ಪಟ್ಟು ಭಾರತೀಯ ಲೋಕಸೇವಾ ತ್ರಿ, ಆಯೋಗ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡೆಹರಾಡೂನ್ ಭಾರತೀಯ ಸೈನ್ಯ ಅಕಾಡೆಮಿಯಲ್ಲಿ 4 ವರ್ಷದ ತರಬೇತಿ ಪಡೆದು ಸೇನಾ ಕೆಡೆಟ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಸೈನ್ಯಾಧಿಕಾರಿಯಾಗಿ ನೇಮಕಗೊಂಡು ರಾಜಸ್ಥಾನದ ಜೋಧಪುರದಲ್ಲಿ ಲೆಫ್ಟಿನೆಂಟ್ ಆಗಿ ಇಸವಿ 2000 ದ ಜೂನ್ ತಿಂಗಳಲ್ಲಿ ವರ್ಗಾವಣೆಯಾಗುತ್ತಾರೆ. ನಂತರ 3 ವರ್ಷದ ಬೆಲೆಕಮ್ಯೂನಿಕೇಶನ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ.
ಜಯರಾಂ ಅವರು 35 ವರ್ಷದ ಕರ್ತವ್ಯದ ವೇಳೆ ಜಮ್ಮು ಮತ್ತು ಕಾಶ್ಮೀರ, ಲೇಹ್-ಲಡಾಕ್, ಕಾರ್ಗಿಲ್, ಪುಲ್ವಾಮಾ, ಶ್ರೀನಗರ ಸೇರಿದಂತೆ ಭಾರತದ ಅನೇಕ ಪ್ರದೇಶಗಳಲ್ಲಿ ಕಠಿಣ ಪರಿಸ್ಥಿತಿಯ ಕರ್ತವ್ಯದಲ್ಲಿ ಕೂಡ ಯಶಸ್ವಿಯಾಗಿ ದೇಶವನ್ನು ರಕ್ಷಿಸಿದ್ದಾರೆ. ಬೆಂಗಳೂರಿನಲ್ಲಿರುವ 7ನೇ ಕರ್ನಾಟಕ ಬೆಟಾಲಿಯನ್ ಎನ್ ಸಿಸಿ ಕಮಾಂಡಿಂಗ್ ಅಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಪ್ರಮುಖವಾದ ಸೇನಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2002ರಲ್ಲಿ ರಾಜಸ್ತಾನ್ ಗಡಿ ಪ್ರದೇಶದಲ್ಲಿ ನಡೆದ ಆಪರೇಷನ್ ಪರಾಕ್ರಮ ಹಾಗೂ 2003- 04ರಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ನಡೆದ ಕೌಂಟರ್ ಟೆರರಿಸಂ ಕಾರ್ಯಾಚರಣೆಯ ಜೊತೆಗೆ ಅಮರನಾಥ್ ಯಾತ್ರೆಯ ರಕ್ಷಣೆಗೆ ನಡೆದ ಆಪರೇಷನ್ ಶಿವ ಸೇನಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಪಾಸ್ ಆದವರಿಗೆ ಉದ್ಯೋಗವಕಾಶ; 15,000 ಸಂಬಳ
2000ರಲ್ಲಿ ಹಾಸನ ಗಂಡಸಿ ಕ್ಷೇತ್ರದ ಮಾಜಿ ಶಾಸಕರಾದ ನಂಜೇಗೌಡ ಅವರ ಪುತ್ರಿ ರೂಪ ಎಂಬುವವರನ್ನು ಮದುವೆಯಾಗಿದ್ದಾರೆ. ಅವರಿಗೆ ಓರ್ವ ಪುತ್ರನಿದ್ದಾನೆ. ಜಯರಾಂ ಅವರ ಸೇನಾ ಕರ್ತವ್ಯವನ್ನು ನಿಭಾಯಿಸಿದ ರೀತಿಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. 2021 ಆಗಸ್ಟ್ 15 ರಂದು ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ 75ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಗಿತ್ತು. (ವರದಿ- ತನು ಕೊಟ್ಟಿಗೆಹಾರ)













