
ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ನೇತೃತ್ವದ ಸರ್ಕಾರ ಇರುವ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದೆ ಆದರೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದರ ಏರಿಕೆಯಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದರು
ನರಸಿಂಹರಾಜಪುರ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು. ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪೆಟ್ರೋಲ್, ಡೀಸೆಲ್‌ಗೆ 7 ರೂಪಾಯಿ ತೆರಿಗೆ ಕಡಿಮೆ ಮಾಡಿದ್ದರು. ಬಿಜೆಪಿ ಸರ್ಕಾರ ಇರುವ ಅರುಣಾಚಲ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಇಲ್ಲಿಗಿಂತ 10 ರೂ ಕಡಿಮೆ ಇದೆ. ಇಂಧನ ದರ ಏರಿಕೆಯಾದರೆ ಅದರ ನೇರ ಹೊಡೆತ ಬಡವರ ಮೇಲೆ ಬೀಳುತ್ತದೆ. ಸರ್ಕಾರವು ತಕ್ಷಣವೇ ದರವನ್ನು ಇಳಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡ ಕ್ಸೇವಿಯಾರ್ ಮಾತನಾಡಿ, ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಹೋರಾಟ ಕೇವಲ ಬಿಜೆಪಿ, ಜೆಡಿಎಸ್ ಹೋರಾಟ ಆಗಿರದೆ ಜನಾಂದೋಲನ ಆಗಬೇಕಾಗಿದೆ ಎಂದರು.

ಆಟೊ ರಿಕ್ಷಾಕ್ಕೆ ಹಗ್ಗ ಕಟ್ಟಿ ಅಂಬೇಡ್ಕರ್ ವೃತ್ತದಿಂದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಎಳೆದು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಜೆಡಿಎಸ್ ಮುಖಂಡರಾದ ಉಪೇಂದ್ರ, ದಿವಾಕರ, ಬಿಜೆಪಿ ಮುಖಂಡರಾದ ಅರುಣ್ ಕುಮಾರ್, ನೀಲೇಶ್, ಎನ್.ಎಂ ಕಾಂತರಾಜ್, ಆಶೀಶ್ ಕುಮಾರ್, ಪರ್ವೀಜ್, ಎಚ್.ಡಿ.ಲೋಕೇಶ್, ಎ.ಬಿ.ಮಂಜುನಾಥ್, ಸುರಭಿ, ವಿಜಯಕುಮಾರ್, ಎಂ.ಎನ್.ನಾಗೇಶ್, ಶ್ರೀನಾಥ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: BPL ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್; ಎರಡೂವರೆ ಲಕ್ಷ ಅರ್ಜಿ ವಿಲೇವಾರಿ ನಂತರವೇ ಹೊಸ ಅರ್ಜಿ ಸ್ವೀಕಾರ
ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾರಿಗೆ ಹಗ್ಗ ಕಟ್ಟಿಕೊಂಡು ಎಳೆದು ಪ್ರತಿಭಟನೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರಿಂದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಧರಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೊನ್ನೆ ಕಿವಿಗೆ ಹೂ ಇಟ್ಟುಕೊಂಡು ಖಾಲಿ ಚಿಪ್ಪು, ಚೆಂಬು ಹಿಡಿದು ಪ್ರತಿಭಟನೆ ನಡೆಸಿದ್ದ ಬಿಜೆಪಿ ಇಂದು ಕಾರಿಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಪ್ರತಿಭಟನೆಯಲ್ಲಿ 200 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದು, ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿರುವ ಸರ್ಕಾರ ಎಂದು ಕಿಡಿಕಾರಿದರು. ವಾಹನಗಳಿಗೆ ಕಾಂಗ್ರೆಸ್ ಚೆಂಬು ಕೊಡ್ತು ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದರು.
ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; 5 ಲಕ್ಷ ರೈತರ ಖಾತೆಗೆ ಬರ ಪರಿಹಾರ ಮೊತ್ತ ಜಮಾ
ಶೃಂಗೇರಿಯಲ್ಲೂ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ:
ಶೃಂಗೇರಿ: ತೈಲ ಬೆಲೆ ಏರಿಕೆ ಖಂಡಿಸಿ ಶೃಂಗೇರಿ ತಾಲ್ಲೂಕು ಬಿಜೆಪಿ ಘಟಕದಿಂದ ಪಟ್ಟಣದ ಬಸ್ ನಿಲ್ದಾಣದಿಂದ ಕಟ್ಟೇಬಾಗಿಲು ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ವಾ?; ಮಾಡದೇ ಇರುವವರಿಗೆ ಮತ್ತೊಂದು ಗುಡ್ ನ್ಯೂಸ್
ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ ಗ್ಯಾರಂಟಿ ಯೋಜನೆಗಳಿಗಾಗಿ ಜನರ ಜೇಬಿಗೆ ಕತ್ತರಿಯನ್ನು ರಾಜ್ಯ ಸರ್ಕಾರ ಹಾಕುತ್ತಿದ್ದು ಬೆಲೆ ಏರಿಕೆ ಮೂಲಕ ರಿಕ್ಷಾ ಚಾಲಕರು ಹಾಗೂ ಬಾಡಿಗೆ ವಾಹನ ಚಾಲಕರ ಜೀವನವನ್ನು ಅತಂತ್ರ ಸ್ಥಿತಿಗೆ ಸರ್ಕಾರ ದೂಡಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕಾರ್ಯನಿರ್ವಹಿಸುವಲ್ಲಿ ಸೋತಿದೆ ಎಂದು ದೂರಿದರು.
ಬಿಜೆಪಿ ಎಸ್ ಸಿ ಮೋರ್ಚಾದ ವಕ್ತಾರ ಬಿ. ಶಿವಶಂಕರ್, ವೇಣುಗೋಪಾಲ್, ಅಡ್ಡಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಹಂಚಲಿ, ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಶೆಟ್ಟಿ, ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯ ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್, ಮಾಜಿ ಸದಸ್ಯ ಕೆ.ಎಸ್ ರಮೇಶ್ ಇದ್ದರು.













