
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದಲ್ಲಿ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಸರ್ಕಾರಿ ಬಸ್‌ನ್ನು ಅಡ್ಡಗಟ್ಟಿ ಹುಚ್ಚಾಟ ಮೆರೆದ ಘಟನೆ ನಡೆದಿದೆ.
ಕಡೂರಿನಿಂದ ಚಿಕ್ಕಮಗಳೂರು ನಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ನಗರದ ‘ಟೆಂಟರ್ ಚಿಕನ್’ ಬಳಿ ದುಷ್ಕರ್ಮಿಗಳು ತಮ್ಮ ಆಟೋ ಅಡ್ಡಗಟ್ಟುವ ಮೂಲಕ ತಡೆದಿದ್ದಾರೆ. ಸುಮಾರು 12 ಗಂಟೆಯ ಸಮಯದಲ್ಲಿ ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿದ ಕಿಡಿಗೇಡಿಗಳು, ಬಸ್ ಮುಂದೆ ನಿಂತು ಅಸಭ್ಯವಾಗಿ ವರ್ತಿಸುತ್ತಾ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ.

ಬಸ್ ಚಾಲಕ ಎಷ್ಟೇ ಮನವಿ ಮಾಡಿದರೂ ಕಿವಿಕೊಡದ ಈ ಕಿಡಿಗೇಡಿಗಳು, ಕೂಗಾಡುತ್ತಾ ದಾಂಧಲೆ ನಡೆಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಧ್ಯರಾತ್ರಿ ಸಾರ್ವಜನಿಕ ರಸ್ತೆಯಲ್ಲಿ ಈ ರೀತಿ ಹುಚ್ಚಾಟ ಮೆರೆದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.














