
ಕೊಪ್ಪ:(ನ್ಯೂಸ್ ಮಲ್ನಾಡ್ ವರದಿ) ಮಾನವ ಧರ್ಮವೇ ಸರ್ವಶ್ರೇಷ್ಠ ಎಂದು ಬೋಧಿಸಿದ ಮಹಾನ್ ಚಿಂತಕ ಶ್ರೀ ನಾರಾಯಣ ಗುರುಗಳ ಆಶಯದಂತೆ “ಶಿಕ್ಷಣದಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಶಾಲಿಗಳಾಗಿರಿ” ಎಂಬ ಧ್ಯೇಯವಾಕ್ಯವನ್ನು ಆದರ್ಶವಾಗಿ ಪಡೆದುಕೊಂಡು ಮಲೆನಾಡಿನ ಹೃದಯಭಾಗವಾದ ಕೊಪ್ಪದಲ್ಲಿ ರೂಪುಗೊಂಡ ಬಿಲ್ಲವ ಯುವ ವಾಹಿನಿ ಸಂಘವು ನಿಸ್ವಾರ್ಥ ಸೇವೆ, ಸಮಾಜಮುಖಿ ಚಟುವಟಿಕೆಗಳು ಹಾಗೂ ಸಮುದಾಯದ ಏಳಿಗೆ ಎಂಬ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಸಂಘವು ಯುವಕರಲ್ಲಿ ಸೇವಾ ಮನೋಭಾವನೆ, ಸಂಘಟಿತ ಶಕ್ತಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದ್ದು,ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂಘದ ಪ್ರಮುಖ ಯೋಜನೆಗಳಲ್ಲೊಂದಾಗಿ ರೂಪುಗೊಂಡಿದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಈ ನಿಟ್ಟಿನಲ್ಲಿ, ಬಿಲ್ಲವ ಯುವ ವಾಹಿನಿಯ ವತಿಯಿಂದ ಶ್ರೀ ಕ್ಷೇತ್ರ ಮೆಕನಹಡ್ಲುವಿನಲ್ಲಿ ವಿಶೇಷ ಗೌರವ ಸಮಾರಂಭವನ್ನು ಆಯೋಜಿಸಲಾಗಿತ್ತು.ದೇವಸ್ಥಾನದ ಕಾರ್ಯನಿರ್ವಹಣೆಯ ನಡುವೆಯೂ, ದೇವಸ್ಥಾನಕ್ಕೆ ಬರುವ ಬಡ ಭಕ್ತಾದಿಗಳಿಗೆ, ರೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಲು ಸಹಾಯ ಮಾಡುವುದು, ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಕಿರು ಕಾಣಿಕೆ ನೀಡುವುದು, ಅನ್ನದಾನ ಸೇರಿದಂತೆ ಅನೇಕ ದಾನ ಧರ್ಮ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಶ್ರೀ ಕ್ಷೇತ್ರದ ಪಾತ್ರಿಗಳನ್ನು ಗುರುತಿಸಿ, ಅವರಿಗೆ “ಬಿಲ್ಲವ ರತ್ನ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸುನಿಲ್ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು, ಸ್ಥಳೀಯ ಗಣ್ಯರು ಹಾಗೂ ಭಕ್ತಾದಿಗಳು ಹಾಜರಿದ್ದು, ಈ ಕಾರ್ಯಕ್ರಮಕ್ಕೆ ಶೋಭೆ ತಂದಿದ್ದಾರೆ. ಸನ್ಮಾನಿತರಾದ ಶ್ರೀ ಕ್ಷೇತ್ರದ ಪಾತ್ರಿಗಳು ತಮ್ಮ ಮಾತುಗಳಲ್ಲಿ ಸಂಘದ ಸೇವಾ ಮನೋಭಾವನೆಗೆ ಕೃತಜ್ಞತೆ ಸಲ್ಲಿಸಿ, ಯುವಕರು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಮುಂದುವರಿಯಬೇಕು ಎಂದು ಆಶಿಸಿದ್ದಾರೆ.
ಈ ಕಾರ್ಯಕ್ರಮವು ಸಮಾಜ ಸೇವೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುವುದರ ಜೊತೆಗೆ ಬಿಲ್ಲವ ಯುವ ವಾಹಿನಿ ಸಂಘದ ಕಾರ್ಯಕ್ಷೇತ್ರಕ್ಕೆ ಇನ್ನಷ್ಟು ಪ್ರೇರಣೆಯನ್ನು ನೀಡಿದೆ.













