
ಕೊಟ್ಟಿಗೆಹಾರದ ವಿದ್ಯಾರ್ಥಿನಿ ಕುಮಾರಿ ಸಿರಿ ಕಳೆದ ವರ್ಷ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಪ್ರಸ್ತುತ ಅವರು ಸ್ವಲ್ಪ ಚೇತರಿಸಿಕೊಂಡಿದ್ದರೂ ನಡೆಯಲಾಗದೆ ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿರಿ ಸಂಪೂರ್ಣ ಗುಣಮುಖರಾಗಲು ಇನ್ನೂ ಸುಮಾರು ರೂ.15 ಲಕ್ಷ ವೆಚ್ಚ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಬಣಕಲ್ ಯುವಕರ ತಂಡ ಆಯೋಜಿಸಿದ್ದ ಬಣಕಲ್ ಡ್ಯಾನ್ಸ್ ಧಮಾಕ ಕಾರ್ಯಕ್ರಮದಲ್ಲಿ ಟಿವಿ ಮುಖಾಂತರ ಸಿರಿಯ ಚಿಕಿತ್ಸಾ ಸ್ಥಿತಿಯ ದೃಶ್ಯಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಂದ ನೆರವು ಕೋರಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಬಣಕಲ್ ನಿವಾಸಿ, ಮೈಸೂರು ಉದ್ಯಮಿ ದಿನೇಶ್ ಶೆಟ್ಟಿ ಅವರು ಕೊಟ್ಟಿಗೆಹಾರಕ್ಕೆ ಭೇಟಿ ನೀಡಿ ಕುಮಾರಿ ಸಿರಿಗೆ ರೂ.1 ಲಕ್ಷ ಮೊತ್ತದ ಚೆಕ್ ನೀಡುವ ಮೂಲಕ ನೆರವು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಶೆಟ್ಟಿ, “ಸಿರಿ ಮೂಡಬಿದಿರೆಯ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಬಡ ಕುಟುಂಬದ ಪ್ರತಿಭಾವಂತ ಮಗಳು. ಪೋಷಕರು ಅವಳ ಮೇಲೆ ಉತ್ತಮ ಭವಿಷ್ಯದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ದುರದೃಷ್ಟಕರ ಅಪಘಾತ ಆ ಕನಸುಗಳಿಗೆ ಅಡ್ಡಿಯಾಗಿದೆ. ಸಿರಿ ಶೀಘ್ರ ಗುಣಮುಖಳಾಗಿ ಮತ್ತೆ ತನ್ನ ವಿದ್ಯಾಭ್ಯಾಸ ಮುಂದುವರಿಸಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಿರಿಯ ತಂದೆ ಆಟೋ ಮಹೇಂದ್ರ, ತಾಯಿ ಶಿಲ್ಪ, ಸಮಾಜ ಸೇವಕರಾದ ಸಂಜಯಗೌಡ, ಎ.ಆರ್. ಅಭಿಲಾಷ್, ಅನಿಲ್ ಮೊಂತೆರೊ, ಅರುಣ್ ಪೂಜಾರಿ, ಸೂರಿ, ರಂಗನಾಥ್, ಚಂದ್ರು, ತನು ಕೊಟ್ಟಿಗೆಹಾರ, ಎ.ಕೆ. ಸಂತೋಷ್, ಮುನೀರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. (ವರದಿ- ತನು ಕೊಟ್ಟಿಗೆಹಾರ)













