
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸಮೀಪದ ಮಲಯ ಮಾರುತ ಗುಡ್ಡದ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ರಸ್ತೆಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕೆನ್ನಾಲಿಗೆಗೆ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಭಯ ಮೂಡಿಸಿದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಬೀಸುತ್ತಿರುವ ಬಲವಾದ ಗಾಳಿಯಿಂದಾಗಿ ಬೆಂಕಿಯ ಜ್ವಾಲೆಗಳು ವೇಗವಾಗಿ ಹರಡಿದ್ದು, ಬೆಂಕಿ ಅರಣ್ಯದ ವಿಶಾಲ ಭಾಗವನ್ನು ಆವರಿಸಿಕೊಂಡು ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಈ ಅಗ್ನಿ ಅವಘಡದಲ್ಲಿ ನೂರಾರು ಪ್ರಾಣಿ-ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿರುವ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಹರಸಾಹಸ ಪಟ್ಟಿದ್ದಾರೆ.

ಇನ್ನು ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಲು ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.














