
ಮಲೆನಾಡಿನ ಶಾಸಕರುಗಳ ಬಳಿಯಲ್ಲಿ ಇನ್ನೂ ಬರೆದಿಟ್ಟಿರುವ 15 ಲಕ್ಷದ ಚೆಕ್ ಗಳು ಎಷ್ಟಿರಬಹುದು? ಇನ್ನೂ ಎಷ್ಟು ಸೂತಕದ ಮನೆಗಳಿಗೆ ಚೆಕ್ ವಿತರಣೆಯ ಶೆಡ್ಯೂಲ್ ಹಾಕಿಕೊಂಡಿದ್ದಾರೆ?
ಆನೆಗಳಿಗೆ ಇನ್ನೂ ಎಷ್ಟು ಬಲಿದಾನ ಆದ ಮೇಲೆ ಮನುಷ್ಯರ ಜೀವ ರಕ್ಷಣೆಗೆ ಮಲೆನಾಡ ಶಾಸಕರುಗಳು, ಸಚಿವರುಗಳು ಕ್ರಮ ಕೈಗೊಳ್ಳಬಹುದು?

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಬೆಳೆಹಾನಿ ಪರಿಹಾರ ಹಣ ಬಿಡುಗಡೆ; ಎಷ್ಟು ಪರಿಹಾರ ಬಿಡುಗಡೆ?, ಇಲ್ಲಿದೆ ನೋಡಿ

ಆನೆ ದಾಳಿಯಂತಹ ಗಂಭೀರ ವಿಚಾರದಲ್ಲಿ ಶಾಸಕರು, ಸಚಿವರು, ಸರಕಾರ ಜವಾಬ್ದಾರಿಯುತವಾಗಿ ರಕ್ಷಣಾತ್ಮಕವಾದ ಸೂಕ್ತ ಕ್ರಮ ಕೈಗೊಳ್ಳುವುದು ಬಿಟ್ಟು, ನೆಡೆದುಕೊಳ್ಳುವುದು ಬಿಟ್ಟು, ಜೀವ ವಿಮೆಯ ಇನ್ಷ್ಯೂರೆನ್ಸ್ ಬಾಂಡ್ ಸಿದ್ದಪಡಿಸಿದಂತೆ, ಸಾವಿನ ಮನೆಗೆ ಹೋಗಿ ಕೊಡಲು ಚೆಕ್ ಸಿದ್ದಪಡಿಸಿಟ್ಟುಕೊಳ್ಳುವ ಕೆಲಸ ಮಾಡುತ್ತ, ಸಾಮಾನ್ಯ ಜನರ ಸಾವನ್ನ ನಿರೀಕ್ಷೆ ಮಾಡ್ತಾ ಇದ್ದಾರಾ!!?
ಮೊನ್ನೆ ಮಾರ್ಚ್ 17 ನೇ ತಾರೀಖು “ಕಾಡಾನೆ ದಾಳಿಗೆ ಬಲಿಯಾದರೆ ಕೊಡುವ ಪರಿಹಾರವನ್ನು ₹15 ಲಕ್ಷದಿಂದ ₹20 ಲಕ್ಷಕ್ಕೆ ಏರಿಸಿಲಾಗಿದೆ” ಎಂದು ಸಚಿವರು ಪ್ರಕಟಣೆ ಕೊಟ್ಟಿದ್ದರು. “ರಾಜ್ಯದಲ್ಲಿ ಇನ್ನು ಮುಂದೆ ಕಾಡಾನೆ ದಾಳಿಗೆ ಒಂದೇ ಒಂದು ಜೀವ ಬಲಿಯಾಗಲು ನಾವು ಬಿಡುವುದಿಲ್ಲ” ಎಂದು ಯಾವ ಶಾಸಕರೂ, ಯಾವ ಸಚಿವರೂ ಹೇಳುವುದಿಲ್ಲ. ನಿರಂತರ ಆನೆ ದಾಳಿಗೆ ಮನುಷ್ಯರ ಸಾವು ಸಂಭವಿಸುವುದು ಒಂದು ಸಹಜ ಪ್ರಕ್ರಿಯೆ ಎಂಬಂತೆ ಸರಕಾರ ವರ್ತಿಸುತ್ತಿದೆ. ಸತ್ತವರ ಮನೆಗೆ ಹೋಗಿ ಸರಕಾರದ ಚೆಕ್ ಕೊಟ್ಟರೆ ಜವಾಬ್ದಾರಿ ಮುಗಿಯಿತು ಎಂಬ ಧೋರಣೆಯಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು ಮತ್ತು ಸರಕಾರ ಇರುವಂತಿದೆ!!.
ಚೆಕ್ ಕೊಡಲು, ಸಾವಿನ ಮನೆಗೆ ಕಾರಿನಲ್ಲಿ (ಬಹುಶಃ ಆ ಕಾರೂ ಕೂಡ ಹೈಟೆಕ್ ಇರಬೇಕು? ಬುಲೆಟ್ ಪ್ರೂಫ್ ಮತ್ತು ಆನೆಗಳ ಹಿಂಡು ಬಂದರೂ ಏನೇನೂ ದಾಳಿ ಮಾಡಲಾಗದ ಸುಭದ್ರವಾದ ಸೆಕ್ಯೂರ್ಡ್ ಕಾರ್ ಇರಬೇಕು!!?) ಹೋಗಿ ಚೆಕ್ ಕೊಡುವ ಕ್ರಮ ಮಾತ್ರ ನಮ್ಮ ಜವಾಬ್ದಾರಿ ಎಂದು ಎಲ್ಲರೂ ಭಾವಿಸಿ, ಚೆಕ್ ಕೊಟ್ಟು ಸೂತಕ ಕಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರಾ?
ಇದನ್ನೂ ಓದಿ: ಶಾಲಾ ಶಿಕ್ಷಕರಿಗೆ ವರ್ಗಾವಣೆ ಬಗ್ಗೆ ಆದೇಶ; ಇಲ್ಲಿದೆ ನೋಡಿ ಡಿಟೈಲ್ಸ್
ಪರಿಹಾರ ಮೊತ್ತ 15 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಯಾಗಿದ್ದರೂ, ನಿನ್ನೆಯ ತರಿಕೆರೆಯಲ್ಲಿನ ಆನೆ ದಾಳಿ ಪ್ರಕರಣದಲ್ಲಿ ಆದ ದುರಂತ ಸಾವಿಗೆ ಶಾಸಕರಿಂದ 15 ಲಕ್ಷದ ಚೆಕ್ ವಿತರಣೆ ಆದ ಸುದ್ದಿ ಪತ್ರಿಕೆಯಲ್ಲಿ ಬಂದಿದೆ. ಹಾಗಾದರೆ ಉಳಿದ 5 ಲಕ್ಷ ಎಲ್ಲಿ ಹೋಯ್ತು!!? ಅಥವಾ 15 ಲಕ್ಷದಿಂದ 20 ಲಕ್ಷಕ್ಕೆ ಬದಲಾದ ಪರಿಹಾರ ಜಾರಿಗೆ ಬರಲು ಏಪ್ರಿಲ್ ಒಂದು (ಹೊಸ ಆರ್ಥಿಕ ವರ್ಷ ಮತ್ತು ಮೂರ್ಖರ ದಿನ!!) ಬರಬೇಕಾ!!? ಪೆಟ್ರೂಲ್ ದರ ಏರಿಕೆ ಆದರೆ, ಅದು ಅವತ್ತೆ ರಾತ್ರಿ 12 ಗಂಟೆಗೆ ಜಾರಿಗೆ ಬರುತ್ತೆ. ಆನೆ ದಾಳಿಗೆ ಬಲಿಯಾದವರಿಗೆ ಕೊಡುವ ಪರಿಹಾರದ ಮೊತ್ತ ಏರಿಕೆಯ ಜಾರಿ ಯಾವಾಗ? ಪ್ರಕಟಣೆಯಾಗಿ ಎಷ್ಟು ದಿನ ಬೇಕು? ಬದಲಾದ ಪರಿಹಾರ ಮೊತ್ತದ ಬಗ್ಗೆ ಆನೆಗೂ ಗೊತ್ತಿಲ್ಲದೆ ಅವುಗಳು ದಾಳಿ ಮಾಡುತ್ತಿವೆ!! ಅಥವಾ ಹೆಚ್ಚುವರಿ 5 ಲಕ್ಷ, ಆನೆಗಳು ದಾರಿ ತಪ್ಪಿದಂತೆ, ದಾರಿ ತಪ್ಪಿ ಯಾರಾದ್ದಾದರೂ ಅಕೌಂಟಿಗೆ ಸೇರಿಕೊಂಡಿತೆ!!? ಪರ್ಸಂಟೇಜ್ ಲೆಕ್ಕದಲ್ಲಿ ಕರಗಿಯೋಯ್ತಾ!!?
ಶಾಲೆಗಳ ಮಹಾದ್ವಾರದಲ್ಲಿ ಬರೆದ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂಬುದನ್ನು ಓದಿ, ಧೈರ್ಯದಿಂದ ಪ್ರಶ್ನಿಸಿದರೂ, ಉತ್ತರ ಹೇಳುವವರು ಯಾರು?
ಮೊನ್ನೆ ಒಂದು ಯಕ್ಷಗಾನ ಪ್ರಸಂಗ ನಡೆಯಿತು. ರಾವಣ ವಧಾ ಪ್ರಸಂಗ. ಇರುವ ಎಲ್ಲಾ ವಾದ್ಯಗಳನ್ನು ತಂದು ಗಟ್ಟಿ ಧ್ವನಿಯಲ್ಲಿ ಬಡಿದಾಗ, ಕೆಲವು ಹೊತ್ತಾದ ಮೇಲೆ ಕುಂಭಕರ್ಣ ನಿದ್ದೆಯಿಂದ ಏಳುವ ದೃಶ್ಯ. ನಾವು ಮಲೆನಾಡಿನವರು ಅಂತಹ ವಾದ್ಯ ಸಲಕರಣೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದೇನೋ? ಕಾಡಾನೆಗಳನ್ನು ಓಡಿಸುವುದಕ್ಕೂ ಆಗಬಹುದು, ನಿದ್ರಿಸುತ್ತಿರುವ ವೈಟ್ ಎಲಿಫೆಂಟ್ ಗಳನ್ನು ಎಚ್ಚರಿಸಲೂ ಉಪಯೋಗಕ್ಕೆ ಬರಬಹುದು.
ಪರಿಹಾರದ ಐದು ಲಕ್ಷ ಎಲ್ಲಿ ಹೋಯ್ತು ಅನ್ನುವ ಪ್ರಶ್ನೆಗೆ ಉತ್ತರ ಗೊತ್ತಿದ್ದವರು ಧೈರ್ಯವಾಗಿ ಉತ್ತರಿಸಿ. – ಅರವಿಂದ ಸಿಗದಾಳ್, ಲೇಖಕರು ಹಾಗೂ ಕೃಷಿಕರು.
ಇದನ್ನೂ ಓದಿ: ರೈಲ್ವೆ ಇಲಾಖೆಯ 9900 ಹುದ್ದೆಗೆ ಅರ್ಜಿ ಆಹ್ವಾನ; SSLC, ITI ವಿದ್ಯಾರ್ಹತೆ – 19,900 ಸಂಬಳ













