ಕೊಟ್ಟಿಗೆಹಾರ, ಆ.08: (ನ್ಯೂಸ್ ಮಲ್ನಾಡ್ ವರದಿ) ವಿಲ್ಪುರಂ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳಿಲ್ ಗದ್ದೆ ಗ್ರಾಮದ ನಿವಾಸಿಗಳಾದ ಜ್ಞಾನೇಶ, ಮೋಹನ ಮತ್ತು ಗುರುಕಿರಣ್ ಮೃತ ಯುವಕರು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಪ್ರೇಮ್ ಮತ್ತು ಹೃತಿಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮೃತರು ಮತ್ತು ಗಾಯಾಳುಗಳು ತುಮಕೂರಿನಿಂದ ಧರ್ಮಸ್ಥಳ ಕ್ಷೇತ್ರ ದರ್ಶನಕ್ಕಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಮುಂಭಾಗ ಹಾದುಹೋಗುವ ವಿಲ್ಪುರಂ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಕಾರು ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಮೂವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಭಾರೀ ಶಬ್ದ ಕೇಳಿ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ರವಾನಿಸಲು ಸಹಕರಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)














