ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಏಕಲವ್ಯ ವಸತಿ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಣ್ಣು, ಚರ್ಮ ಹಾಗೂ ಸಾಮಾನ್ಯ ಕಾಯಿಲೆಗಳ ಆರೋಗ್ಯ ತಪಾಸಣೆ ನಡೆಸಿ ಔಷಧಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ವಿಶೇಷ ಗಮನ ಈ ಶಿಬಿರದ ಪ್ರಮುಖ ಆಕರ್ಷಣೆಯಾಗಿತ್ತು.
ಈ ಆರೋಗ್ಯ ಶಿಬಿರವನ್ನು ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು, ವಿಮುಕ್ತಿ ಚಾರಿಟೆಬಲ್ ಟ್ರಸ್ಟ್ ಹಾಗೂ ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಬಣಕಲ್ ಚರ್ಚ್ ಸಭಾಭವನದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಸುಮಾರು 250 ಮಂದಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿಗಳನ್ನು ಪಡೆದುಕೊಂಡರು.

ಏಕಲವ್ಯ ಶಾಲೆಯಲ್ಲಿ ಮಾತನಾಡಿದ ಬಣಕಲ್ ಚರ್ಚ್ ಸಹಾಯಕ ಗುರು ಫಾ. ತೋಮಸ್ ಕಲಘಟಗಿ, “ಆರೋಗ್ಯಭರಿತ ಕುಟುಂಬದಿಂದ ಸಂತೋಷಭರಿತ ಸಮಾಜ ನಿರ್ಮಾಣವಾಗುತ್ತದೆ. ಆರೋಗ್ಯ ಸರಿಯಾಗಿಲ್ಲದಿದ್ದರೆ ಜೀವನವೇ ಶೂನ್ಯವೆನಿಸುತ್ತದೆ. ಆದ್ದರಿಂದ ಆರೋಗ್ಯವೇ ನಮ್ಮ ದೊಡ್ಡ ಸಂಪತ್ತು” ಎಂದು ಹೇಳಿದರು.
ಶಿಬಿರವನ್ನು ಉದ್ಘಾಟಿಸಿದ ವಿಮುಕ್ತಿ ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ಫಾ. ಅರುಣ್ ಲೋಬೊ ಅವರು, ಗ್ರಾಮೀಣ ಜನರ ಆರೋಗ್ಯದ ಮಹತ್ವವನ್ನು ವಿವರಿಸಿದರು. ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಅವರು ಆರೋಗ್ಯ ಸಂಬಂಧಿತ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ಸುಶೀಲ್ ಅವರು ಆರೋಗ್ಯ ಸೇವೆಗಳ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಏಕಲವ್ಯ ಶಾಲೆಯ ಪ್ರಿನ್ಸಿಪಾಲ್ ಸತೀಶ್ ಪ್ರಸಾದ್ ಜೈಸ್ವಾಲ್ ಹಾಗೂ ಶಾಲೆಯ ಸಿಬ್ಬಂದಿಗಳು, ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ಫ್ರೆಡ್ರಿಕ್ ಲೋಬೊ, ಒಕ್ಕೂಟ ಅಧ್ಯಕ್ಷೆ ಆತಿಕಾ ಬಾನು, ಪದಾಧಿಕಾರಿಗಳಾದ ವಿಕ್ಟರ್ ಮಾರ್ಟಿಸ್, ವಿನುತಾ ಸೆರಾವೊ, ಪ್ರಶಾಂತಿ ಡಿ’ಸೋಜಾ, ಡಾ. ಲಿಯೋ ಸುದೇಶ್, ವಿಮುಕ್ತಿ ಮಹಿಳಾ ಒಕ್ಕೂಟದ ಪ್ರತಿನಿಧಿಗಳಾದ ಸರೋಜಾ ಮತ್ತಿಕಟ್ಟೆ, ಲಿಲ್ಲಿ ಮೋನಿಸ್, ವಿಮುಕ್ತಿ ಸಂಯೋಜಕಿ ವಿಂದ್ಯಾ ಯೋಗೀಶ್, ಸಿಬ್ಬಂದಿಗಳಾದ ಸ್ವಾತಿಶ್ರೀ, ಸವಿತಾ ಹಾಗೂ ಸಂಘದ ಸ್ವಯಂಸೇವಕರು ಉಪಸ್ಥಿತರಿದ್ದರು. (ವರದಿ- ತನು ಕೊಟ್ಟಿಗೆಹಾರ)













