ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಏಳನೂರುಕಾನು ಎಸ್ಟೇಟ್‌ನಲ್ಲಿ ಬಂದೂಕು ಹಿಡಿದು ಓಡಾಡಿದ ದೃಶ್ಯಗಳ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತೋಟದಮಕ್ಕಿ ಗ್ರಾಮದ ಪುಟ್ಟೇಗೌಡ, ರಮೇಶ ಮತ್ತು ಗಿರೀಶ ಬಂಧಿತ ಆರೋಪಿಗಳು. ಪ್ರಾಣಿಗಳ ಬೇಟೆಗಾಗಿ ಹೋಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 17, 21 ಮತ್ತು 22ರಂದು ರಾತ್ರಿ ವೇಳೆ ಬಂದೂಕು ಹಿಡಿದು ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಅವರ ಚಲನ ವಲನಗಳು ಅನುಮಾನಾಸ್ಪದವಾಗಿದ್ದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಸಾಧ್ಯತೆ ಇದೆ. ಆದ್ದರಿಂದ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಏಳನೂರುಕಾನು ಎಸ್ಟೇಟ್‌ನ ವ್ಯವಸ್ಥಾಪಕಿ ದಿವ್ಯಾ ಅವರು ಮಲ್ಲಂದೂರು ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ಒಂದೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

ಸಚಿವ ಕೆ.ಜೆ.ಜಾರ್ಜ್ ಕುಟುಂಬದ ಪಾಲುದಾರಿಕೆ ಹೊಂದಿರುವ ಎಸ್ಟೇಟ್ ಇದಾಗಿದೆ. ಇದೇ ಏಳನೂರುಕಾನು ಎಸ್ಟೇಟ್ ಸುತ್ತಮುತ್ತ ವಾರದ ಹಿಂದೆ ಎರಡು ಹುಲಿಗಳು ಸಂಚರಿಸಿರುವ ದೃಶ್ಯ ಕೂಡ ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.














