ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ವಿವಾಹಿತ ಮಹಿಳೆಯೊಬ್ಬಳ ವಿಷಯಕ್ಕಾಗಿ ಇಬ್ಬರು ಪುರುಷರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಒಬ್ಬನ ಹಸ್ತ ಸಂಪೂರ್ಣವಾಗಿ ಕತ್ತರಿಸಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅರುಣ್ (35) ಎಂಬಾತನ ಹಸ್ತ ಕತ್ತರಿಸಲ್ಪಟ್ಟಿದೆ. ಆರೋಪಿ ಶೇಷಗಿರಿ (40) ಎಂಬಾತ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ:
ಪತಿಗಿಂತ ಬೇರೆಯಾಗಿ ಜೀವಿಸುತ್ತಿದ್ದ ನಾಗರತ್ನ ಎಂಬ ಮಹಿಳೆಯ ವಿಷಯದಲ್ಲಿ ಶೇಷಗಿರಿ ಮತ್ತು ಅರುಣ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಶೇಷಗಿರಿ, ಅರುಣ್ ಎಂಬುವನ ಮೇಲೆ ಲಾಂಗ್ ಬೀಸಿದ್ದಾನೆ.

ತನ್ನ ಮೇಲೆ ಎರಗಿದ ಲಾಂಗ್‌ನಿಂದ ಬಚಾವಾಗಲು ಅರುಣ್ ಕೈ ಅಡ್ಡ ಕೊಟ್ಟಿದ್ದಾನೆ. ಈ ಸಂದರ್ಭದಲ್ಲಿ ಲಾಂಗ್ ಅರುಣ್‌ನ ಹಸ್ತ ಸಂಪೂರ್ಣವಾಗಿ ತುಂಡಾಗಿ ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಅರುಣ್‌ನನ್ನು ತಕ್ಷಣವೇ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.














