ಮೂಡಿಗೆರೆ: ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಉಪಕರಣ ವಿತರಣೆ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಡವರು, ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳ ನೆರವಿಗೆ ಧಾವಿಸಿರುವ ಮೂಡಿಗೆರೆ ತಾಲ್ಲೂಕಿನ ಸಂಯುಕ್ತ ಜಮಾಅತ್ ಒಕ್ಕೂಟ (ರಿ.) ಮಾನವೀಯ ಸೇವೆಯ ಮೂಲಕ ಗಮನ ಸೆಳೆದಿದೆ.

ಒಕ್ಕೂಟದ ವತಿಯಿಂದ ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ವೈದ್ಯಕೀಯ ಉಪಕರಣಗಳನ್ನು ಬಳಕೆಗೆ ನೀಡುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದೆ.

ವೀಲ್‌ಚೇರ್, ವಾಕರ್, ವಾಕಿಂಗ್ ಸ್ಟಿಕ್ ಹಾಗೂ ಆಸ್ಪತ್ರೆಯ ರೋಗಿಗಳ ಬೆಡ್ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ಇದರಿಂದ ಅನಾರೋಗ್ಯದಿಂದ ಬಳಲುತ್ತಿರುವವರು, ಅಂಗವಿಕಲರು ಹಾಗೂ ವೃದ್ಧರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಒಕ್ಕೂಟದ ಅಧೀನದಲ್ಲಿರುವ ಎಲ್ಲಾ ಜಮಾಅತ್ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ವೈದ್ಯಕೀಯ ಉಪಕರಣಗಳ ಅಗತ್ಯವಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಈ ಸೌಲಭ್ಯ ತಲುಪಿಸುವಂತೆ ಮನವಿ ಮಾಡಲಾಗಿದೆ. ಅಗತ್ಯವಿರುವವರು ತಮ್ಮ ಸ್ಥಳೀಯ ಜಮಾಅತ್ ಸಮಿತಿಗಳನ್ನು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಇನ್ನು ವೈದ್ಯಕೀಯ ಉಪಕರಣಗಳ ನೆರವಿನ ಜೊತೆಗೆ ಕ್ಯಾನ್ಸರ್ ಹಾಗೂ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮಾಸಿಕ ಸಹಾಯಧನ, ತುರ್ತು ಚಿಕಿತ್ಸೆಗೆ ಆರ್ಥಿಕ ನೆರವು, ಬಡ ಕುಟುಂಬಗಳ ಮದುವೆ ಕಾರ್ಯಗಳಿಗೆ ಸಹಾಯಧನ ಹಾಗೂ ವಸ್ತ್ರ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಒಕ್ಕೂಟ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು ಹಾಗೂ ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಸಾಮರಸ್ಯವನ್ನು ಬೆಳೆಸುವುದು ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಜಮಾಅತ್ ಸಮಿತಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ಒಕ್ಕೂಟ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸಿ.ಕೆ. ಇಬ್ರಾಹಿಂ ಹಾಜಿ, ಪ್ರಧಾನ ಕಾರ್ಯದರ್ಶಿ ಜೆ.ಬಿ. ಮುಹಮ್ಮದ್ ಅಲಿ ಹಾಜಿ, ಉಪಾಧ್ಯಕ್ಷರಾದ ಎಂ.ಎ. ಅಬ್ದುಲ್ ಮಜೀದ್, ಎ.ಸಿ. ಅಯೂಬ್ ಹಾಜಿ, ಎಂ.ಎಸ್. ಇಬ್ರಾಹಿಂ ಹಾಜಿ, ಸಹ ಕಾರ್ಯದರ್ಶಿ ಸಿ.ಎ. ಅಜ್ಗರ್, ಮೊಯ್ದಿನ್ ಸೆಟ್ ಹಾಗೂ ವೈದ್ಯಕೀಯ ಉಪಕರಣಗಳ ಉಸ್ತುವಾರಿಗಳಾದ ಹಮೀದ್ ಸಬ್ಬೆನಹಳ್ಳಿ, ಕೆ.ಎಚ್. ಅಬ್ದುಲ್ ಕರೀಂ ಹಾಜಿ, ಹಸನ್ ಹಾಜಿ, ಎ.ಸಿ. ಆಸಿಫ್ ಹಾಜಿ ಮತ್ತು ಹನೀಫ್ ಹಾಜಿ ಬಿಳಗುಳ ಉಪಸ್ಥಿತರಿದ್ದರು. (ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.