ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದ ಕಾಫಿ ತೋಟವೊಂದರಲ್ಲಿ ಕೊಳೆರೋಗ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಸುಮಾರು ಮೂರು ಎಕರೆ ವ್ಯಾಪ್ತಿಯ ಕಾಫಿ ಬೆಳೆ ತೀವ್ರ ಹಾನಿಗೊಳಗಾಗಿದೆ.
ನಿರಂತರ ಮಳೆ ಹಾಗೂ ತೇವಾಂಶ ಹೆಚ್ಚಿದ ಪರಿಣಾಮ ರೋಗವು ವೇಗವಾಗಿ ಹರಡಿದ್ದು, ಕಾಫಿ ಹಣ್ಣುಗಳು ನೆಲಕ್ಕೆ ಉದುರಿ ಕೊಳೆತು ಹೋಗಿವೆ. ಇದರಿಂದ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುವ ಆತಂಕ ಎದುರಾಗಿದೆ.

“ನಮ್ಮ ಮೂರು ಎಕರೆ ಕಾಫಿ ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡು ಬಹುತೇಕ ಹಣ್ಣುಗಳು ನೆಲಕ್ಕೆ ಬಿದ್ದು ಕೊಳೆತು ಹೋಗಿವೆ. ಈ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ನಮಗೆ ಭಾರೀ ನಿರಾಸೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಹಾಗೂ ತಾಂತ್ರಿಕ ಮಾರ್ಗದರ್ಶನ ನೀಡಬೇಕು,” ಎಂದು ತೋಟದ ಮಾಲೀಕರ ಪುತ್ರ ವಿನಯ್ ಕುಮಾರ್ ತಿಳಿಸಿದ್ದಾರೆ.

ಕೊಳೆರೋಗದ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವ ಜೊತೆಗೆ ಹಾನಿಗೊಳಗಾದ ಕಾಫಿ ಬೆಳೆಗಾರರಿಗೆ ಸರ್ಕಾರ ಪರಿಹಾರ ಘೋಷಿಸಬೇಕೆಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)













