ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಶಾರದಾ ಪೀಠಕ್ಕೆ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವದೂತ ವಿನಯ್ ಗುರೂಜಿ ಇಂದು ಭೇಟಿ ನೀಡಿ ಜಗದ್ಗುರುಗಳ ಅಶೀರ್ವಾದ ಪಡೆದಿದ್ದಾರೆ.

ನವೆಂಬರ್ 10ರಂದು ಶೃಂಗೇರಿಯ ಮಾರುತಿ ಬೆಟ್ಟ (ಮರುನಾಮಕರಣಹೊಂಡಿರುವ ಶಂಕರಾಚಾರ್ಯ ಹಿಲ್) ದಲ್ಲಿ ಲೋಕಾರ್ಪಣೆಗೊಳ್ಳಲಿರುವ 600 ಟನ್ ತೂಕದ ಶಂಕರಾಚಾರ್ಯರ ಶಿಲಾ ಮೂರ್ತಿಗೆ 40 ಅಡಿ ಉದ್ದದ ರುದ್ರಾಕ್ಷಿ ಮಾಲೆಯನ್ನು ಅರ್ಪಿಸಿದ ವಿನಯ್ ಗುರೂಜಿ ಭಿಕ್ಷಾ ವಂದನೆ ಸಲ್ಲಿಸಿದ್ದಾರೆ. ಈ ವೇಳೆ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು ಅಶೀರ್ವದಿಸಿ ವಿವೇಕ ಚೂಡಾಮಣಿ ಗ್ರಂಥವನ್ನು ಪ್ರಸಾದದ ರೂಪದಲ್ಲಿ ವಿನಯ್ ಗುರೂಜಿ ಅವರಿಗೆ ನೀಡಿದ್ದಾರೆ.


ನಾಳೆ (ನ.10) ಶಂಕರಾಚಾರ್ಯ ಶಿಲಾಮೂರ್ತಿ ಉದ್ಘಾಟನೆ:

ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿರುವ ಪ್ರಶಾಂತವಾದ ಪಟ್ಟಣದಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದರು. ಇದೀಗ ಈ ಪ್ರಸಿದ್ದ ನೆಲದಲ್ಲಿ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆಗೆ ಸಜ್ಜಾಗಿದೆ.
32 ಅಡಿ ಎತ್ತರದ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ:
ಶಾರದಾ ಪೀಠದಿಂದ 2 ಕಿ.ಮೀ. ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಾಣವಾಗಿರುವ 32 ಅಡಿ ಎತ್ತರದ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆ ನ.10ರಂದು ನೆರವೇರಲಿದೆ. ಭವ್ಯಮೂರ್ತಿ ಸ್ಥಾಪಿಸುವ ಆಶಯದಿಂದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ 2013 ರ ಜೂ.3 ರಂದು ಮಾರುತಿ ಬೆಟ್ಟದಲ್ಲಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಶ್ರೀ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದಲ್ಲಿಯೇ ಶಂಕರರ ಪ್ರತಿಮೆ ಜತೆಗೆ ಅವರ ಶಿಷ್ಯರಾದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯರ ಮೂರ್ತಿಗಳು ಅನಾವರಣಗೊಳ್ಳಲಿವೆ.

2 ಎಕರೆಯಲ್ಲಿ ನಿರ್ಮಾಣ:
45 ಕೋಟಿ ರೂ. ವೆಚ್ಚದಲ್ಲಿ ಸುಮಾರು 2 ಎಕರೆ ಜಾಗದಲ್ಲಿ ಮೂರ್ತಿ ನಿರ್ಮಾಣವಾಗಿದ್ದು, ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆಯನ್ನು ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಸರಿಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.
ಸೂರ್ಯಾಸ್ತ ವೀಕ್ಷಣೆಗೆ ವ್ಯವಸ್ಥೆ:
ಈ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು ಮತ್ತು ಇಳಿಯಲು ಎಸ್ಕಲೇಟರ್ ಅಳವಡಿಸಲಾಗಿದ್ದು, ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ಒಳಗೊಂಡಿದೆ.













