
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಹೋಂ ಸ್ಟೇಯೊಂದರಲ್ಲಿ ತಂಗಿದ್ದ ಯುವತಿ ಸ್ನಾನದ ಗೃಹದಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಈ ದುರ್ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಹಾಂದಿ ಗ್ರಾಮದ ಹಿಪ್ಲ (Hippla) ಹೆಸರಿನ ಹೋಂ ಸ್ಟೇಯಲ್ಲಿ ನಡೆದಿದೆ.
ಇದನ್ನೂ ಓದಿ: ಪಂಚಾಯಿತಿಯಲ್ಲೇ ಸಿಗಲಿವೆ ಜನನ-ಮರಣ ಪ್ರಮಾಣ ಪತ್ರ

ಮೃತ ಯುವತಿ ರಂಜಿತಾ (27), ಬೇಲೂರು ತಾಲ್ಲೂಕು ದೇವಲಾಪುರ ಮೂಲದ ದೇವರಾಜು ಗೌಡ ಅವರ ಪುತ್ರಿ. ರಂಜಿತಾರ ಸಹೋದರ ಶರತ್ ಮೂಡಿಗೆರೆ ಪಟ್ಟಣದ ಗೆಂಡೇಹಳ್ಳಿ ರಸ್ತೆಯ ರವಿ ಕ್ಯಾಂಟೀನ್ ಪಕ್ಕ ಬೇಕರಿ ನಡೆಸುತ್ತಿದ್ದು, ಅವರ ಕುಟುಂಬ ಮೂಡಿಗೆರೆಯಲ್ಲಿಯೇ ವಾಸವಾಗಿರುವುದು ತಿಳಿದುಬಂದಿದೆ.

ರಂಜಿತಾ ದಾವಣಗೆರೆ ಮೂಲದ ತಮ್ಮ ಗೆಳತಿ ರೇಖಾ ಅವರೊಂದಿಗೆ ಶುಕ್ರವಾರ ಹಿಪ್ಲ ಹೋಂ ಸ್ಟೇಯಲ್ಲಿ ತಂಗಿದ್ದರು. ಶನಿವಾರ ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ಸ್ನಾನದ ಗೃಹದಲ್ಲಿ ಕುಸಿದು ಬಿದ್ದ ರಂಜಿತಾ ಸಾವನ್ನಪ್ಪಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಇಬ್ಬರೂ ತಮ್ಮ ಸ್ನೇಹಿತೆಯೊಬ್ಬರ ಎಂಗೇಜ್‌ಮೆಂಟ್ ಕಾರ್ಯಕ್ರಮಕ್ಕಾಗಿ ಮೂಡಿಗೆರೆಗೆ ಬಂದಿದ್ದರು. ಶುಕ್ರವಾರ ಸಂಜೆ ಹಾಂದಿ ಸಮೀಪದ ಹೋಂ ಸ್ಟೇನಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ.
ಸಹೋದ್ಯೋಗಿ ರೇಖಾ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ತಡರಾತ್ರಿ ರಂಜಿತಾ ಕಂಪ್ಯೂಟರ್‌ನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ ರೇಖಾ ಸ್ನಾನ ಮುಗಿಸಿಕೊಂಡು ಬಂದ ನಂತರ ರಂಜಿತಾ ಸ್ನಾನಕ್ಕೆ ಹೋಗಿ ಬಹಳ ಹೊತ್ತಾದರೂ ಹೊರಬರದ ಕಾರಣ ಕಿಟಕಿಯಿಂದ ನೋಡಿದಾಗ ಅವರು ಬಿದ್ದಿರುವುದು ಗಮನಕ್ಕೆ ಬಂದಿದೆ. ಹೋಂ ಸ್ಟೇ ಸಿಬ್ಬಂದಿ ಸಹಾಯದಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ರಂಜಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಮೂಡಿಗೆರೆ ಹೊಯ್ಸಳ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತರೆಂದು ಘೋಷಿಸಿದ್ದಾರೆ. ನಂತರ ಮೃತದೇಹವನ್ನು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆಗೆ ಅನುಮತಿ
ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದು, ಸೋರಿಕೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ಗ್ಯಾಸ್ ಸೋರಿಕೆಯ ಲಕ್ಷಣಗಳು ಕಂಡುಬರಲಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂಬ ಸಾಧ್ಯತೆಯನ್ನೂ ಪೊಲೀಸರು ಪರಿಗಣಿಸಿದ್ದಾರೆ. ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ರವಿಯವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. (ವರದಿ- ತನು ಕೊಟ್ಟಿಗೆಹಾರ)













