ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಮೂಡಿಗೆರೆಯ ಛತ್ರ ಮೈದಾನದ ಸದಸ್ಯರ ತಂಡ ಸ್ವಂತ ಹಣದ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚಿದರು.

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; ಈ ದಿನ ರೈತರ ಖಾತೆಗೆ ಬರಲಿದೆ 15ನೇ ಕಂತಿನ ಹಣ; ಹಣ ರಿಲೀಸ್ ಗೆ ಡೇಟ್ ಫಿಕ್ಸ್

ಪಟ್ಟಣ ಪಂಚಾಯಿತಿ ವತಿಯಿಂದ ಕಳೆದ ವರ್ಷ ಕುಡಿಯುವ ನೀರಿನ ಸಂಪರ್ಕವಾಗಿ ಸಂದೇಶ್ ಚಿತ್ರ ಮಂದಿರ ಸಮೀಪ ಇರುವ ರಸ್ತೆಗಳು ಅಗೆಯಲಾಗಿತ್ತು. ಕಾಮಗಾರಿ ಮುಗಿದ ನಂತರ ರಸ್ತೆಗೆ ಮಣ್ಣು ಹಾಕಿ ಮುಚ್ಚಲಾಗಿತ್ತು. ಅದರ ಮೇಲೆ ಡಾಂಬರು ಹಾಕದೇ ಇರುವುದರಿಂದ ಗುಂಡಿಗಳ ಗಾತ್ರ ದೊಡ್ಡದಾಗಿ ಕಾಣಿಸುತ್ತಾ ವಾಹನ ಸವಾರರಿಗೆ, ಶಾಲಾ ಮಕ್ಕಳಿಗೆ ಮತ್ತು ಪಾದಚಾರಿಗಳಿಗೆ ನಿತ್ಯ ತೊಂದರೆ ಅನುಭವಿಸುವಂತಾಗಿತ್ತು. ಇದಕ್ಕೆ ಕಾರಣ ಮೂಡಿಗೆರೆ ಪಟ್ಟಣ ಪಂಚಾಯಿತಿ. ಈ ನಿರ್ಲಕ್ಷ್ಯಕ್ಕೆ ಬೇಸತ್ತ ಛತ್ರ ಮೈದಾನ ತಂಡದ ಸದಸ್ಯರು ಸೇರಿ ಶ್ರಮದಾನದ ಮೂಲಕ ಗುಂಡಿಗಳು ಮುಚ್ಚಿದರು.


ತಂಡದ ಅನಿಲ್ ಎಂ.ವಿ, ಅವಿನಾಶ್ ಎಂ.ಜಿ., ಶಿವಕುಮಾರ್, ಸೂರ್ಯ, ವಿವೇಕ್, ಸುಧೀರ್, ಎಂ.ಎಲ್.ಅವಿನಾಶ್, ಸುಹೀಲ್, ರಾಮು, ಜಗದೀಶ್, ಮೋಹನ್, ದರ್ಶನ್, ಗೋಪಾಲ್ ಸಿಂಗ್, ರಾಘವೇಂದ್ರ, ಪುಟ್ಟಣ್ಣ ಇನ್ನಿತರರು ಇದ್ದರು.
ವರದಿ- ತನು ಕೊಟ್ಟಿಗೆಹಾರ

ಚಿಕ್ಕಮಗಳೂರು: ದತ್ತಮಾಲ ಅಭಿಯಾನ | ಎಲ್ಲೆಡೆ ಬಿಗಿ ಬಂದೋಬಸ್ತ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಶ್ರೀರಾಮ ಸೇನೆ ನಡೆಸುತ್ತಿರುವ ದತ್ತಮಾಲಾ ಅಭಿಯಾನದ ಭಾಗವಾಗಿ ಭಾನುವಾರ ಶೋಭಾಯಾತ್ರೆ ನಡೆಯಲಿದ್ದು, ಭದ್ರತೆ ಸೇರಿ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲಾಡಳಿತದಿಂದ ಭದ್ರತೆ:
ಅಭಿಯಾನದ ಅಂತಿಮ ದಿನವಾದ ಭಾನುವಾರ ನಗರದ ಶಂಕರಮಠದಿಂದ ಎಂ.ಜಿ.ರಸ್ತೆ ಮೂಲಕ ಅಜಾದ್ ಪಾರ್ಕ್ ತನಕ ಶೋಭಾಯಾತ್ರೆ ನಡೆಯಲಿದೆ. ಬಳಿಕ ಮಾಲಾಧಾರಿಗಲು ಚಂದ್ರದ್ರೋಣ ಪರ್ವತ ಏರಿ ಇನಾಂ ದತ್ತಾತ್ರೇಯ ಪೀಠ (ಐ.ಡಿ. ಪೀಠ) ವ್ಯಾಪ್ತಿಯಲ್ಲಿ ಸತ್ಯ ದತ್ತವ್ರತ ಮತ್ತು ದತ್ತ ಹೋಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಊಹಿಸಿದೆ. ಸೂಕ್ತ ಭದ್ರತೆ ಒದಗಿಸಲು ತಯಾರಿ ನಡೆಸಿದೆ.
ಒಂದೂವರೆ ಸಾವಿರ ಪೊಲೀಸರ ನಿಯೋಜನೆ:
ದತ್ತಮಾಲ ಅಭಿಯಾನಕ್ಕೆ ಭದ್ರತೆ ಒದಗಿಸಲು ಹೊರ ಜಿಲ್ಲೆಯ ಒಂದೂವರೆ ಸಾವಿರ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. 6 ಡಿವೈಎಸ್‌ಪಿ, 20 ಇನ್‌ಸ್ಪೆಕ್ಟರ್‌ಗಳು, 89 ಸಬ್ ಇನ್ ಸ್ಪೆಕ್ಟರ್, 141 ಎ.ಎಸ್.ಐಗಳು, 956 ಹೆಡ್ ಕಾನ್ ಸ್ಟೆಬಲ್ ಮತ್ತು ಕಾನ್ ಸ್ಟೆಬಲ್ ಗಳು, 250 ಗೃಹ ರಕ್ಷಕ ಸಿಬ್ಬಂದಿ, 8 ಕೆಎಸ್‌ಆರ್‌ಪಿ ತುಕಡಿ ಮತ್ತು 12 ಸಶಸ್ತ್ರ ಮೀಸಲುಪಡೆ ತಕಡಿ ನಿಯೋಜಿಸಲಾಗಿದೆ. 80 ಸೆಕ್ಷನ್ ಪಾಯಿಂಟ್ ಗಳನ್ನು ಗುರುತಿಸಲಾಗಿದೆ. ಪಾಯಿಂಟ್ ಗಳ ಸೂಕ್ಷ್ಮತೆ ಆಧರಿಸಿ ಅಲ್ಲಿಗೆ ಎಷ್ಟು ಸಿಬ್ಬಂದಿ ನಿಯೋಜಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 26 ಚೆಕ್‌ಪೋಸ್ಟ್:
ಜಿಲ್ಲೆಯ ಗಡಿಭಾಗ ನಗರ ಮತ್ತು ಗಿರಿಭಾಗ ಸೇರಿ ಒಟ್ಟು 26 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಜಿಲ್ಲೆಯಾದ್ಯಂತ 49 ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಹೊರ ಜಿಲ್ಲೆಗಳಿಂದ ಬರುವ ವಾಹನಗಳ ತಪಾಸಣೆಗೆ ಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು ಇನ್ನೆರಡು ದಿನ ಜಿಲ್ಲೆಗೆ ಬರುವ ವಾಹನಗಳ ಮೇಲೆ ಪೊಲೀಸರು ನಿಗಾ ಇಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಮೂರು ದಿನ ಪ್ರವಾಸ ನಿರ್ಬಂಧ:
ದತ್ತಮಾಲಾ ಅಭಿಯಾನದ ಅಂಗವಾಗಿ ನ.೪ರಿಂದ (ಶನಿವಾರ) ನ.6ರ ಬೆಳಿಗ್ಗೆ 10 ಗಂಟೆ ತನಕ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ಐ.ಡಿ ಪೀಠ ಮಾಣಿಕ್ಯಧಾರಾ ಜಲಪಾತ ಗಾಳಿಕೆರೆ ಪ್ರವಾಸಿತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ದಟ್ಟಣೆ ಉಂಟಾಗುವ ಕಾರಣಕ್ಕೆ ಬೇರೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.













