
ದುಬೈನಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಚಿನ್ನದ ಪದಕವು ಭಾರತ ದೇಶಕ್ಕೆ ಲಭಿಸಿದೆ. ಈ ಮೂಲಕ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ 76 ವರ್ಷದ ಹಿರಿಯ ಸಾಧಕ ಶಿವಪ್ಪ ಸಲಕಿ ತ್ರಿವರ್ಣ ಧ್ವಜವು ಹಾರಾಡುವಂತೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ದುಬೈ ಹಾರಿದ್ದ ಶಿವಪ್ಪ, ಜು.31 ರಿಂದ ಆ.6 ರವರೆಗೆ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಈ ಪೈಕಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಪ್ರಥಮ ಸ್ಥಾನ ಗಿಟ್ಟಿಸುವ ಮೂಲಕ ಚಿನ್ನದ ಪದಕ ಪಡೆದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಇದರಿಂದ ಸಲಕಿ ಕುಟುಂಬವಲ್ಲದೇ ಮರೇವಾಡ ಗ್ರಾಮಸ್ಥರೆಲ್ಲರಲ್ಲೂ ಸಂತಸ ಮೂಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೂಡ ಮೆಚ್ಚುಗೆ ವ್ಯಕ್ತವಾಗಿದೆ.













