
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಹಾಸ್ಟೆಲ್ನಿಂದ ಹೊರಗೆ ಹೋದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು, ಕುಟುಂಬದವರು ಆತಂಕಗೊಂಡಿದ್ದಾರೆ. ವಿದ್ಯಾರ್ಥಿಗಾಗಿ ಸಂಬಂಧಿಕರು ಹಾಗೂ ಸ್ನೇಹಿತರು ವಿವಿಧೆಡೆ ಹುಡುಕಾಟ ನಡೆಸಿದರೂ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಶೇಖರ್ ಅವರ ಪುತ್ರ ರಕ್ಷಿತ ಟಿ.ಎಸ್. (19) ನಾಪತ್ತೆಯಾದ ಯುವಕ. ಈತ ಚಿಕ್ಕಮಗಳೂರಿನ ಸಿಐಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ. ನರ್ಸಿಂಗ್ (ಎಎಚ್ಎಸ್) ವ್ಯಾಸಂಗ ಮಾಡುತ್ತಿದ್ದು, ಹೌಸಿಂಗ್ ಬೋರ್ಡ್ನ ಸರ್ಕಾರಿ ವೃತ್ತಿಪರ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ವಾಸವಾಗಿದ್ದನು.
ನವೆಂಬರ್ 7ರಂದು ಮಧ್ಯಾಹ್ನ 12.34ರ ಸುಮಾರಿಗೆ ಹಾಸ್ಟೆಲ್ನಿಂದ ಹೊರಗೆ ಹೋದ ರಕ್ಷಿತ ಮತ್ತೆ ವಾಪಸಾಗಿಲ್ಲ. ಹಾಸ್ಟೆಲ್ನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆತ ಹೊರಗೆ ಹೋಗಿರುವುದು ದೃಢಪಟ್ಟಿದೆ. ಅದೇ ದಿನ ರಾತ್ರಿ 9 ಗಂಟೆಗೆ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವುದಾಗಿ ಸ್ನೇಹಿತರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ನಂತರ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿಲ್ಲ.

ರಕ್ಷಿತನಿಗಾಗಿ ಸಂಬಂಧಿಕರು, ಸ್ನೇಹಿತರು ಹಾಗೂ ಹಾಸನದ ಹಿಮ್ಸ್ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಆತನ ಸಹೋದರ ರಂಜಿತ್ ಟಿ.ಎಸ್. ಅವರು ನವೆಂಬರ್ 11ರಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಕ್ಷಿತ ಸುಮಾರು 5.4 ಅಡಿ ಎತ್ತರ, ನೀಳಕಾಯದ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾನೆ. ನಾಪತ್ತೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಬೂದು ಬಣ್ಣದ ಜಾಕೆಟ್ ಧರಿಸಿದ್ದು, ಕಪ್ಪು ಬಣ್ಣದ ಬ್ಯಾಗ್ ಹೊಂದಿದ್ದನು.
ಈ ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ 9480805145 ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸರು ಹಾಗೂ ಕುಟುಂಬದವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)













