
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಕಾಡುಕೋಣದ ದಾಳಿಯಲ್ಲಿ ಒಬ್ಬ ಕಾಫಿ ಕೃಷಿಕ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ.
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ

ಮೃತರಾದವರು ಬಾಳೂರು ಹೋಬಳಿಯ ದುರ್ಗದಹಳ್ಳಿ ವರ್ತೆಮನೆ ನಿವಾಸಿ ಡಿ.ವಿ. ರಮೇಶ್ ಗೌಡ(52). ಅವರು ತಮ್ಮ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಮೀಪದ ಹಲಗಡಕ ಎಂಬಲ್ಲಿ ಕಾಡುಕೋಣ ಹಿಂಬದಿಯಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ರಮೇಶ್ ಅವರು ನೋವಿನಿಂದ ಕೂಗಿದ ಶಬ್ದ ಕೇಳಿದ ತಕ್ಷಣ ಪಕ್ಕದ ಎಸ್ಟೇಟ್‌ನ ಕಾರ್ಮಿಕರು ಮತ್ತು ರೈಟರ್ ಸ್ಥಳಕ್ಕೆ ಧಾವಿಸಿ ರಕ್ತಸ್ರಾವದಿಂದ ಗಾಯಗೊಂಡ ರಮೇಶ್ ಅವರನ್ನು ಕಳಸ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ರೈತರಿಗೆ ಹೊಸ ಪಹಣಿ, ನಕ್ಷೆ ನೀಡಲು ಅಭಿಯಾನ; ಸಚಿವ ಕೃಷ್ಣ ಬೈರೇಗೌಡ ಮಾಹಿತಿ
ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಕಾಡುಕೋಣಗಳ ಹಾವಳಿ ವಿರೋಧಿಸಿ ಧ್ವನಿ ಎತ್ತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಮೂಡಿಗೆರೆ-ಕಳಸ ಪ್ರದೇಶದಲ್ಲಿ ಕಾಡು ಪ್ರಾಣಿಗಳ ದಾಳಿಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಹಲವರು ಗಾಯಗೊಂಡಿದ್ದಾರೆ ಹಾಗೂ ಕೆಲವು ಸಾವಿಗೀಡಾಗಿದ್ದಾರೆ.
ಗ್ರಾಮಸ್ಥರ ಆಗ್ರಹ:
ಕಾಡು ಪ್ರಾಣಿಗಳ ದಾಳಿಗೆ ಶಾಶ್ವತ ಪರಿಹಾರ ನೀಡುವಂತೆ, ತೋಟಗಳಿಗೆ ರಕ್ಷಣಾತ್ಮಕ ತಡೆಗೋಡೆ, ಅರಣ್ಯ ಇಲಾಖೆಯ ಗಸ್ತು ಬಲವರ್ಧನೆ, ಹಾಗೂ ತ್ವರಿತ ಪರಿಹಾರ ಧನ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)













