ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಳೆದೇವರು ಎಂಬ ಖ್ಯಾತಿಯನ್ನು ಹೊಂದಿರುವ ಶ್ರೀ ಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ ಮಹಾರಥೋತ್ಸವವು ಗುರುವಾರ ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!\

ಬೆಳಗ್ಗೆ 9.20 ಗಂಟೆಗೆ ಶುಭ ಮುಹೂರ್ತದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವಮೂರ್ತಿಯನ್ನು ಅಲಂಕರಿಸಲಾದ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಭಕ್ತರು “ಹರ ಹರ ಮಹಾದೇವ” ಎಂಬ ಘೋಷಣೆಗಳೊಂದಿಗೆ ಭಕ್ತಿಭಾವದಿಂದ ರಥವನ್ನು ಸುಮಾರು ನೂರು ಅಡಿ ದೂರದವರೆಗೆ ಎಳೆದರು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟಿದ ತಳಿರು ತೋರಣಗಳು, ಚಾಮರ-ಛತ್ರಿಗಳು, ಸುಂದರ ರಂಗೋಲಿ ಅಲಂಕಾರಗಳು ಹಾಗೂ ಚಂಡೆ, ತಾಳ ಮತ್ತು ವಿವಿಧ ವಾದ್ಯಗಳ ಮೇಳವು ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.


ಉತ್ಸವದ ಅಂಗವಾಗಿ ದೇವಾಲಯದ ಋತ್ವಿಜರು ಹಾಗೂ ಅರ್ಚಕರು ಭಕ್ತರಿಗೆ ಪ್ರಸಾದ ವಿತರಿಸಿದರು. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿಯೂ ರಥೋತ್ಸವ ಮುಂದುವರಿದು ದೇವಾಲಯದ ಸಮೀಪದವರೆಗೆ ರಥವನ್ನು ಮರುಎಳೆಯುವ ಕಾರ್ಯಕ್ರಮ ನಡೆಯಿತು. ಮಹಾರಥೋತ್ಸವದ ಹಿನ್ನೆಲೆಯಲ್ಲಿ ಕಿಗ್ಗಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾತ್ರೆಯ ಸಂಭ್ರಮ ಮೂಡಿದ್ದು, ವಿವಿಧ ಅಂಗಡಿಮುಂಗಟ್ಟುಗಳು ತೆರೆಯಲ್ಪಟ್ಟು ಭಕ್ತರ ಓಡಾಟ ಹೆಚ್ಚಾಗಿ ಕಂಡುಬಂತು.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಸಿದ್ದಿಹೇರಂಬ ಪೂಜೆ, ಅಂಕುರಾರ್ಪಣೆ, ಭೇರಿತಾಡವಪೂರ್ವಕ ಧ್ವಜಾರೋಹಣ, ಕೌತುಕಬಂಧನ, ವೃಷಭಾರೋಹಣ ಸೇರಿದಂತೆ ಹಲವು ವಿಧಿವಿಧಾನಗಳು ನೆರವೇರಿಸಲ್ಪಟ್ಟವು. ಅದಲ್ಲದೆ ಮಹಾಗಣ ಹೋಮ, ಹಂಸಾರೋಹಣ, ಗಜಾರೋಹಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ಮಹಾರಥೋತ್ಸವವು ಸಾವಿರಾರು ಭಕ್ತರನ್ನು ಆಕರ್ಷಿಸಿ, ಕಿಗ್ಗಾ ಕ್ಷೇತ್ರದ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಪ್ರತಿಬಿಂಬಿಸಿತು.














