ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಕೋಡು ಎಂಬಲ್ಲಿ ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಗೋ ಕಳ್ಳತನದ ಘಟನೆಯೊಂದು ನಡೆದಿದೆ.
ಇನ್ನೋವಾ ಕಾರಿನಲ್ಲಿ ಬಂದಿದ್ದ ಕಳ್ಳರು ಸ್ಥಳೀಯರ ಜಾನುವಾರುಗಳನ್ನು ಕಳವು ಮಾಡಿ ವಾಹನದಲ್ಲಿ ಮೂರರಿಂದ ನಾಲ್ಕು ದನಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನವನ್ನು ಗಮನಿಸಿದ ಸ್ಥಳೀಯ ಯುವಕರು ಕೂಡಲೇ ಬೆನ್ನಟ್ಟಿದ್ದಾರೆ. ಆದರೆ ವೇಗವಾಗಿ ಚಲಿಸಿದ ಇನ್ನೋವಾ ಕಾರು ಯುವಕರ ಕಣ್ಣುತಪ್ಪಿಸಿ ದನಗಳೊಂದಿಗೆ ಪರಾರಿಯಾಗಿದೆ.

ಕಳ್ಳರು ತಪ್ಪಿಸಿಕೊಂಡರೂ ಅವರು ಬಂದಿದ್ದ ಇನ್ನೋವಾ ಕಾರಿನ ನಂಬರ್ ಪ್ಲೇಟ್ ಮತ್ತು ಕಾರಿನ ದೃಶ್ಯಗಳು ಸ್ಥಳೀಯ ಯುವಕರ ಮೊಬೈಲ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಳುವಾದ ಜಾನುವಾರುಗಳನ್ನು ಪತ್ತೆಹಚ್ಚುವಂತೆ ಸ್ಥಳೀಯರು ಆಗುಂಬೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.














