ಜಯಪುರ: ಭಾರೀ ಮಳೆಗೆ ರಸ್ತೆ ಕುಸಿತದ ಭೀತಿ: ಹೊರನಾಡು ಸಂಪರ್ಕ ಕಡಿತವಾಗುವ ಆತಂಕ

ಜಯಪುರ: (ನ್ಯೂಸ್‌ ಮಲ್ನಾಡ್‌ ವರದಿ) ನಿರಂತರ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಅತ್ತಿಕುಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತುಕಡಿಗೆ ಸಮೀಪ ರಸ್ತೆ ಬದಿಯ ಚರಂಡಿ ಕುಸಿದಿದ್ದು, ಕೊಗ್ರೆಯಿಂದ ಕಲ್ಲುಗುಡ್ಡೆ, ಮೆಣಿಸಿನ ಹಾಡ್ಯ ಹಾಗೂ ಶೃಂಗೇರಿ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಮಳೆಯ ನೀರು ರಸ್ತೆ ಬದಿಗೆ ನುಗ್ಗಿ ಚರಂಡಿಯ ಮಣ್ಣು ಕೊಚ್ಚಿಕೊಂಡು ಹೋಗಿರುವ ಪರಿಣಾಮ ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ. ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ಸ್ಥಳದಲ್ಲಿ ಈ ಹಿಂದೆಯೂ ರಸ್ತೆ ಕುಸಿದಿದ್ದರೂ ಶಾಶ್ವತ ಪರಿಹಾರ ಕೈಗೊಳ್ಳದ ಕಾರಣ ಇದೀಗ ಮತ್ತೆ ಸಮಸ್ಯೆ ಮರುಕಳಿಸಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಗಳಿಗೂ ಅಪಾಯ
ರಸ್ತೆಯ ಕೆಳಭಾಗದಲ್ಲಿ ಹಾದುಹೋಗಿರುವ ಚರಂಡಿ ಮತ್ತಷ್ಟು ಕೊರೆತ ಉಂಟುಮಾಡುತ್ತಿರುವುದರಿಂದ ಸಮೀಪದ ಮೂರು-ನಾಲ್ಕು ಮನೆಗಳಿಗೆ ಅಪಾಯ ಎದುರಾಗಿದೆ. ಈಗಾಗಲೇ ಒಂದು ಕುಟುಂಬ ಸುರಕ್ಷತಾ ದೃಷ್ಟಿಯಿಂದ ಮನೆ ಖಾಲಿ ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಇಂಜಿನಿಯರ್ ಭೇಟಿ
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಇಂಜಿನಿಯರ್ ಸುನೀಲ್ ಪರಿಶೀಲನೆ ನಡೆಸಿದರು. ತುರ್ತು ಕ್ರಮವಾಗಿ ಮರಳಿನ ಮೂಟೆಗಳನ್ನು ಅಳವಡಿಸಿ ಮತ್ತಷ್ಟು ಕುಸಿತವಾಗದಂತೆ ತಾತ್ಕಾಲಿಕ ರಕ್ಷಣಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ
ಜಯಪುರ ಪಿಎಸ್‌ಐ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ರಸ್ತೆ ಮೂಲಕ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ ಅವರು, ಸಮಸ್ಯೆಯನ್ನು ಸಂಬಂಧಿತ ಇಲಾಖೆಯ ಗಮನಕ್ಕೆ ತರುವುದಾಗಿ ತಿಳಿಸಿದರು. ಅಪಾಯದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಇಲಾಖೆ ನೀಡಿರುವ ಭರವಸೆಯಂತೆ ತುರ್ತು ಕಾಮಗಾರಿ ನಾಳೆಯಿಂದಲೇ ಆರಂಭವಾಗಿ ರಸ್ತೆ ಸುರಕ್ಷಿತವಾಗುತ್ತದೆಯೇ ಎಂಬುದನ್ನು ಗ್ರಾಮಸ್ಥರು ಕಾದು ನೋಡುತ್ತಿದ್ದಾರೆ. (ವರದಿ: ಶಶಿ ಬೆತ್ತದಕೊಳಲು)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.